ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಪ್ರಯತ್ನಿಸುತ್ತಾರೆ. ಆದರೆ ಈ ಕನಸುಗಳ ನಡುವೆ ಬರುವ ದೊಡ್ಡ ಅಡ್ಡಿಯೆಂದರೆ ಹಣ. ಶಾಲಾ ಕಾಲೇಜುಗಳ ಶುಲ್ಕ ವಿಪರೀತವಾದಾಗ ಪೋಷಕರು ಕಂಗಾಲಾಗ್ತಾರೆ. ಆದ್ರೆ ನೀವೇನಾದ್ರೂ ಮಕ್ಕಳಿಗೆ ಎಂಜಿನಿಯರಿಂಗ್ ಶಿಕ್ಷಣ ಕೊಡಿಸಬೇಕು ಎಂದುಕೊಂಡಿದ್ರೆ ಅತೀ ಕಡಿಮೆ ಶುಲ್ಕ ವಿಧಿಸುವ ಕಾಲೇಜುಗಳಿವೆ. ಎಂಜಿನಿಯರಿಂಗ್ ಅಧ್ಯಯನವು ವಿಶ್ವದ ಅತ್ಯಂತ ದುಬಾರಿ ಪದವಿಪೂರ್ವ ಕೋರ್ಸ್ಗಳಲ್ಲಿ ಒಂದಾಗಿದೆ.
ಈ ಕಾರಣದಿಂದ ಮಧ್ಯಮ ವರ್ಗದ ಕುಟುಂಬಗಳ ಎಷ್ಟೋ ಮಕ್ಕಳು ಇಂಜಿನಿಯರ್ ಆಗುವ ಕನಸು ಹೊತ್ತಿದ್ದರೂ ಫೀಸ್ ಕಟ್ಟಲು ಸಾಧ್ಯವಾಗದೇ ಬೇರೆ ಪದವಿಯತ್ತ ಮುಖ ಮಾಡುತ್ತಾರೆ. ಆದ್ರೆ ಈ ಕಾಲೇಜುಗಳಲ್ಲಿ ಶುಲ್ಕ ಕೇವಲ ವಾರ್ಷಿಕ 10 ಸಾವಿರದಿಂದ ಪ್ರಾರಂಭ.
ಜಾದವ್ಪುರ ವಿಶ್ವವಿದ್ಯಾಲಯ: ಜಾದವ್ಪುರ ವಿಶ್ವವಿದ್ಯಾಲಯ ದೇಶದ ಉನ್ನತ ಬಿ.ಟೆಕ್ ಸಂಸ್ಥೆಗಳಲ್ಲಿ ಒಂದಾಗಿದೆ. ಇಲ್ಲಿ ಬಿ.ಟೆಕ್ ಕೋರ್ಸ್ ನ ವಾರ್ಷಿಕ ಬೋಧನಾ ಶುಲ್ಕ ಕೇವಲ 10 ಸಾವಿರ ರೂಪಾಯಿ. 4 ವರ್ಷಗಳ ಬಿ.ಟೆಕ್ ಕೋರ್ಸ್ಗೆ ಶುಲ್ಕ 1,20,000 ರೂಪಾಯಿ.
ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯ: ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ನ ವಿವಿಧ ವಿಭಾಗಗಳಲ್ಲಿ ಬಿ.ಟೆಕ್ ಕೋರ್ಸ್ ಅನ್ನು ನೀಡಲಾಗುತ್ತದೆ. ಈ ವಿಶ್ವವಿದ್ಯಾನಿಲಯದ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗವು ದೇಶದ ಪ್ರಮುಖ ಉನ್ನತ ಕಲಿಕೆ ಮತ್ತು ಸಂಶೋಧನಾ ಸಂಸ್ಥೆಯಾಗಿದೆ. ಇಲ್ಲಿ ಬಿ.ಟೆಕ್ ಕೋರ್ಸ್ ಗೆ ಒಂದು ವರ್ಷದ ಶುಲ್ಕ ಸುಮಾರು 30,560 ರೂಪಾಯಿ ಇದೆ. ಈ ವಿಶ್ವವಿದ್ಯಾಲಯದಲ್ಲಿ ಪ್ರವೇಶವನ್ನು ಜೆಇಇ ಮೇನ್ ಮೂಲಕ ಮಾಡಲಾಗುತ್ತದೆ.
ರಾಷ್ಟ್ರೀಯ ಡೈರಿ ಸಂಸ್ಥೆ: ರಾಷ್ಟ್ರೀಯ ಡೈರಿ ಸಂಸ್ಥೆ ಹರಿಯಾಣದ ಕರ್ನಾಲ್ನಲ್ಲಿದೆ. ಇದನ್ನು 1955 ರಲ್ಲಿ ಸ್ಥಾಪಿಸಲಾಯಿತು. ಈ ಸಂಸ್ಥೆಯಿಂದ ನೀವು ಡೈರಿ ಟೆಕ್ನಾಲಜಿಯಲ್ಲಿ ಬಿ.ಟೆಕ್ ಪದವಿ ಪಡೆಯಬಹುದು. ಡೈರಿ ಇಂಜಿನಿಯರಿಂಗ್ನಲ್ಲಿ ಬಿಟೆಕ್ಗೆ ಇಡೀ ದೇಶದಲ್ಲೇ ಅತ್ಯುತ್ತಮ ಸಂಸ್ಥೆ ಇದಾಗಿದೆ. ಇಲ್ಲಿ ಬಿ.ಟೆಕ್ ಕೋರ್ಸ್ ನ ಒಂದು ವರ್ಷದ ಶುಲ್ಕ ಸುಮಾರು 32 ಸಾವಿರ ರೂಪಾಯಿ.
ಅಳಗಪ್ಪ ಚೆಟ್ಟಿಯಾರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ: ಅಳಗಪ್ಪ ಚೆಟ್ಟಿಯಾರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ತಮಿಳುನಾಡಿನ ಕಾರೈಕುಡಿಯಲ್ಲಿದೆ. ಇದು ಸರ್ಕಾರಿ ಕಾಲೇಜು. ಇದು ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದೆ. ಈ ಕಾಲೇಜು 5 ಕ್ಕೂ ಹೆಚ್ಚು ವಿಭಾಗಗಳಲ್ಲಿ ಬಿ.ಟೆಕ್ ಕೋರ್ಸ್ಗಳನ್ನು ನೀಡುತ್ತದೆ. ಇಲ್ಲಿ ಬಿ.ಟೆಕ್ ಕೋರ್ಸ್ ಗೆ ವಾರ್ಷಿಕ ಶುಲ್ಕ 39,560 ರೂಪಾಯಿ.
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯವು ದೇಶದ ಉನ್ನತ ವಿಶ್ವವಿದ್ಯಾಲಯಗಳಲ್ಲೊಂದು. ಇದು ಕೇಂದ್ರೀಯ ವಿಶ್ವವಿದ್ಯಾಲಯವೂ ಹೌದು. ಇಲ್ಲಿ ಬಿ.ಟೆಕ್ ಅಲ್ಲದೆ ಇನ್ನೂ ಹಲವು ಕೋರ್ಸ್ ಗಳನ್ನು ನಡೆಸಲಾಗುತ್ತಿದೆ. ಬಿ.ಟೆಕ್ ಕೋರ್ಸ್ ನ ಶುಲ್ಕ 43,400 ರೂಪಾಯಿ ಇದೆ.