ಮಹಾಮಾರಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿಯೂ ತನ್ನ ಕಬಂಧಬಾಹು ಚಾಚುತ್ತಿದ್ದು, ಎಲ್ಲೆಡೆ ಆತಂಕ ಮನೆ ಮಾಡುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿದ್ದ ಸೋಂಕಿತರ ಸಂಖ್ಯೆ, ನಿಧಾನವಾಗಿ ಸ್ಥಳೀಯವಾಗಿಯೂ ಹೆಚ್ಚಳವಾಗುತ್ತಿದೆ.
ಈ ಮೂಲಕ ದೇಶಕ್ಕೆ ಮೂರನೇ ಅಲೆ ಲಗ್ಗೆಯಿಟ್ಟಿರುವುದು ಸ್ಪಷ್ಟವಾಗುತ್ತಿದೆ. ಮೊದಲ ಅಲೆ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿಯೇ ಹೆಚ್ಚಾಗಿ ಸೋಂಕಿತರ ಸಂಖ್ಯೆ ದಾಖಲಾಗುತ್ತಿತ್ತು. ಈ ಸಂದರ್ಭದಲ್ಲಿಯೂ ಅಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಬರೋಬ್ಬರಿ 26,538 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಮುಂಬಯಿ ನಗರವೊಂದರಲ್ಲಿಯೇ ಈ ಸಮಯದಲ್ಲಿ 15,166 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆಯಲ್ಲಿ ಕೂಡ ಹೆಚ್ಚಳವಾಗುತ್ತಿದ್ದು, 797 ಓಮಿಕ್ರಾನ್ ಪ್ರಕರಣಗಳು ಇಲ್ಲಿಯವರೆಗೆ ದಾಖಲಾಗಿವೆ.
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕೂಡ ಸೋಂಕಿತರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗುತ್ತಿದೆ. ಅಲ್ಲಿ ಕಳೆದ 24 ಗಂಟೆಗಳಲ್ಲಿ 14,022 ಜನರಲ್ಲಿ ಹೊಸದಾಗಿ ಕೊರೊನಾ ಕಾಣಿಸಿಕೊಂಡಿದ್ದು, 17 ಜನ ಬಲಿಯಾಗಿದ್ದಾರೆ.
ಗುಜರಾತ್ ನಲ್ಲಿ ಕೂಡ ಹೆಮ್ಮಾರಿಯ ಭಯ ಶುರುವಾಗಿದ್ದು, 3,350 ಜನರಲ್ಲಿ ಕಳೆದ 24 ಗಂಟೆಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಒಂದೇ ದಿನ ಅಲ್ಲಿ 50 ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಕೂಡ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ದೇಶಾದ್ಯಂತ ಮತ್ತೊಮ್ಮೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಸ್ಪಷ್ಟವಾಗುತ್ತಿದೆ.