ದೇಶದಲ್ಲಿ ನೂರು ವರ್ಷಕ್ಕೂ ಮೇಲ್ಪಟ್ಟ 2.49 ಲಕ್ಷ ಮತದಾರರಿದ್ದಾರೆ ಎಂಬ ಮಾಹಿತಿಯನ್ನು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೀಡಿದ್ದಾರೆ. ಪುಣೆಯಲ್ಲಿ ನಡೆದ ಮತದಾರರ ನೋಂದಣಿ ಜಾಗೃತಿ ರ್ಯಾಲಿಗೆ ಚಾಲನೆ ನೀಡಿದ ಬಳಿಕ ಅವರು ಈ ವಿಷಯ ತಿಳಿಸಿದ್ದಾರೆ.
80 ವರ್ಷಕ್ಕಿಂತ ಮೇಲ್ಪಟ್ಟ 1.80 ಕೋಟಿ ಮತದಾರರು ಇದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದು, ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಮತದಾರರ ಗುರುತಿನ ಚೀಟಿ ಜೊತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ಸುಸೂತ್ರವಾಗಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಕಲಸಿದ್ಧತೆ ನಡೆಸಿದೆ. ದೇಶದ ಮೊದಲ ಮತದಾರ ಎಂಬ ಹೆಗ್ಗಳಿಕೆ ಹೊಂದಿದ್ದ ಹಿಮಾಚಲ ಪ್ರದೇಶದ ಶ್ಯಾಮ್ ಸರಣ್ ನೇಗಿ ಇತ್ತೀಚೆಗೆ ಅಂಚೆ ಮತದಾನ ಮಾಡಿದ ಬಳಿಕವೇ ವಿಧಿವಶರಾಗಿದ್ದರು.