ದೆಹಲಿಯ ತಮ್ಮ ನಿವಾಸದ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಬಳಿಕ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ದೇಶಕ್ಕಾಗಿ ನಾನು ಪ್ರಾಣತ್ಯಾಗ ಮಾಡಲೂ ಕೂಡ ಸಿದ್ಧನಿದ್ದೇನೆ ಎಂದು ಭಾವುಕ ಹೇಳಿಕೆ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಗೂಂಡಾಗಿರಿ ಮಾಡುವ ಮೂಲಕ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಅಲ್ಲದೆ ಆ ಪಕ್ಷದ ಸಂಸದರೇ ಇದರ ನೇತೃತ್ವ ವಹಿಸಿದ್ದು ದುರದೃಷ್ಟಕರ ಎಂದು ಕೇಜ್ರಿವಾಲ್ ಹೇಳಿದರು.
ದೆಹಲಿ ವಿಧಾನಸಭೆಯಲ್ಲಿ ಮಾತನಾಡುವ ವೇಳೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಕುರಿತು ವ್ಯಂಗ್ಯವಾಡಿದ್ದ ಅರವಿಂದ್ ಕೇಜ್ರಿವಾಲ್, ಚಿತ್ರವನ್ನು ಯೂಟ್ಯೂಬ್ನಲ್ಲಿ ಹಾಕಿದರೆ ಎಲ್ಲರೂ ಉಚಿತವಾಗಿ ನೋಡಲಿದ್ದಾರೆ ಎಂದು ಹೇಳಿದ್ದರು.
ಅವರ ಈ ಹೇಳಿಕೆಯನ್ನು ಖಂಡಿಸಿ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೆಲವರು ಕಟ್ಟಡದ ಕೆಲ ಭಾಗಕ್ಕೆ ಹಾನಿ ಮಾಡಿದ್ದರು.