ರಾಜ್ಯದಲ್ಲಿ ರಾಜ್ಯಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಇದರ ಮಧ್ಯೆ ಹೊಂದಾಣಿಕೆ ರಾಜಕೀಯದ ಮಾತುಗಳು ಸಹ ಕೇಳಿ ಬರುತ್ತಿದ್ದು, ಆದರೆ ಯಾವುದೇ ಪಕ್ಷಗಳು ಗುಟ್ಟು ಬಿಟ್ಟುಕೊಟ್ಟಿಲ್ಲ.
ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವೇಳೆ, ಈ ಹಿಂದೆ ರಾಜ್ಯಸಭಾ ಚುನಾವಣೆಯಲ್ಲಿ ದೇವೇಗೌಡರು ಕಣಕ್ಕಿಳಿದಾಗ ಕಾಂಗ್ರೆಸ್ ಅಭ್ಯರ್ಥಿಯನ್ನು ನಿಲ್ಲಿಸದೇ ಅವರನ್ನು ಬೆಂಬಲಿಸಿತ್ತು. ಹೀಗಾಗಿ ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಲು ನಮ್ಮ ಪಕ್ಷ ಕಾರಣವಾಗಿತ್ತು. ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲಿ ಎಂದು ಹೇಳಿದ್ದರು.
ಇದಕ್ಕೆ ಖಡಕ್ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಿದ್ದರ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ. ದೇವೇಗೌಡರು ರಾಜ್ಯಸಭೆಗೆ ಬರಬೇಕೆಂದು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿ ಈ ವಿಚಾರವನ್ನು ಯಡಿಯೂರಪ್ಪನವರಿಗೆ ಹೇಳಿತ್ತು. ಅದರಂತೆ ಯಡಿಯೂರಪ್ಪನವರು ನನಗೆ ಕರೆ ಮಾಡಿ ರಾಜ್ಯಸಭೆಗೆ ಬಿಜೆಪಿಯಿಂದ ಅಭ್ಯರ್ಥಿಯನ್ನು ಹಾಕುತ್ತಿಲ್ಲ. ದೇವೇಗೌಡರು ನಾಮಪತ್ರ ಸಲ್ಲಿಸಲಿ ಎಂದಿದ್ದರು. ಈ ವಿಚಾರ ತಿಳಿದ ಬಳಿಕವೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.