ದೇವಸ್ಥಾನಗಳನ್ನು ಕಟ್ಟುವವರು ವಡ್ಡರು. ಆದರೆ ನಿರ್ಮಾಣವಾದ ಬಳಿಕ ಬೇರೊಬ್ಬರು ಅದರ ಒಳಗಿರುತ್ತಾರೆ. ಇಂತಹ ವ್ಯವಸ್ಥೆ ಬದಲಾವಣೆಯಾಗದ ಹೊರತು ನ್ಯಾಯ ಸಿಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಶಿವಮೊಗ್ಗದ ಎನ್ಇಎಸ್ ಮೈದಾನದಲ್ಲಿ ಭಾನುವಾರದಂದು ನಡೆದ ಜಿಲ್ಲಾ ಭೋವಿ (ವಡ್ಡರ) ಸಮಾಜದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿಯೇ ಬಸವಣ್ಣನವರು ‘ಇವನಾರವ ಇವನಾರವ ಇವ ನಮ್ಮವ….’ ಎಂಬ ವಚನದ ಮೂಲಕ ಎಲ್ಲರೂ ಒಂದೇ ಎಂಬುದನ್ನು ಸಾರಿದ್ದರು. ಆದರೆ ಇಂದಿಗೂ ಸಹ ಜಾತಿ ವ್ಯವಸ್ಥೆ ಗಟ್ಟಿಯಾಗಿ ಬೇರೂರಿದೆ ಎಂದು ಹೇಳಿದರು.
ಎಲ್ಲಿಯವರೆಗೆ ಶ್ರೇಣಿಕೃತ ವ್ಯವಸ್ಥೆ ಜಾರಿಯಲ್ಲಿರುತ್ತದೋ ಅಲ್ಲಿಯವರೆಗೆ ಸಮಾನತೆ ಎಂಬುದು ಮರೀಚಿಕೆಯಾಗುತ್ತದೆ ಎಂದು ಅಭಿಪ್ರಾಯಪಟ್ಟ ಸಿದ್ದರಾಮಯ್ಯನವರು, ಹಕ್ಕುಗಳಿಗಾಗಿ ಹೋರಾಡುವಾಗ ಧ್ವನಿ ಗಟ್ಟಿಯಾಗಿರಬೇಕು ಎಂದು ತಿಳಿಸಿದರು.