ಪ್ರತಿ ದಿನ ದೇವರ ಮುಖ ನೋಡಿ ಹಾಸಿಗೆಯಿಂದ ಏಳುವವರಿದ್ದಾರೆ. ಹಾಗೆಯೇ ಎಲ್ಲ ನಿತ್ಯ ಕರ್ಮ ಮುಗಿಸಿ, ದೇವರಿಗೆ ಪೂಜೆ ಮಾಡಿಯೇ ಮುಂದಿನ ಕೆಲಸ ಮಾಡುವವರೂ ಅನೇಕರಿದ್ದಾರೆ. ಹಿಂದು ಧರ್ಮದಲ್ಲಿ ದೇವರ ಪೂಜೆಗೆ ಮಹತ್ವವಿದೆ. ಹಾಗಾಗಿಯೇ ಪ್ರತಿಯೊಬ್ಬರ ಮನೆಯಲ್ಲೂ ದೇವರ ಮನೆಯಿರುತ್ತದೆ. ದೇವರ ಮನೆಯಲ್ಲಿ ದೇವರ ಪೂಜೆ ಮಾಡಿದ್ರೆ ಸಾಲದು, ದೇವರ ಮನೆ ಹೇಗಿರಬೇಕು, ಅಲ್ಲಿ ಯಾವ ಮೂರ್ತಿ ಇರಬೇಕು ಹಾಗೆ ಅದ್ರ ಪೂಜೆ ಹೇಗೆ ಮಾಡಬೇಕು ಎಂಬುದು ಕೂಡ ಭಕ್ತರಿಗೆ ತಿಳಿದಿರಬೇಕು.
ದೇವರ ಮನೆಯಲ್ಲಿ ಕೆಲ ವಸ್ತುಗಳನ್ನು ಇಡುವುದ್ರಿಂದ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಸಾಮಾನ್ಯವಾಗಿ ದೇವರ ಪೂಜೆ ಮಾಡುವಾಗ ನಾವು ದೀಪ ಬೆಳಗುತ್ತೇವೆ. ದೀಪ ಹಚ್ಚಲು ಬೆಂಕಿಕಡ್ಡಿ ಬಳಸ್ತೇವೆ. ಪ್ರತಿ ನಿತ್ಯ ಪೂಜೆಗೆ ಬೇಕು ಎನ್ನುವ ಕಾರಣಕ್ಕೆ ಬೆಂಕಿಪೊಟ್ಟಣವನ್ನು ಅಲ್ಲಿಯೇ ಇಡ್ತೇವೆ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ ಇದು ತಪ್ಪು. ಯಾವುದೇ ಕಾರಣಕ್ಕೂ ದೇವರ ಮನೆಯಲ್ಲಿ ಬೆಂಕಿಕಡ್ಡಿಯನ್ನು ಇಡಬಾರದು. ಹಾಗೆಯೇ ಹಚ್ಚಿದ ಬೆಂಕಿಕಡ್ಡಿ ಚೂರನ್ನು ಕೂಡ ದೇವರ ಮನೆಯಲ್ಲೇ ಎಸೆಯಲಾಗುತ್ತದೆ. ಇದು ಕೂಡ ತಪ್ಪು. ಇದ್ರಿಂದ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಹಾಗಾಗಿ ಹಚ್ಚಿದ ಬೆಂಕಿಕಡ್ಡಿಯನ್ನು ಕಸಕ್ಕೆ ಎಸೆಯಲು ಮರೆಯಬೇಡಿ.
ದೇವರ ಮನೆ, ಮನೆಯ ಕೇಂದ್ರಬಿಂದು. ಮನೆಯಲ್ಲೆಲ್ಲ ಸಂತೋಷವಿರಬೇಕೆಂದ್ರೆ ದೇವರ ಮನೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಎಂದಿಗೂ ದೇವರ ಮನೆಯಲ್ಲಿ ಹಾಳಾದ ವಿಗ್ರಹವನ್ನು ಇಡಬಾರದು. ದೇವರ ಮನೆಯಲ್ಲಿ ವಿಗ್ರಹ, ದೇವರ ಫೋಟೋವನ್ನು ಒಟ್ಟಿಗೆ ಅಂಟಿಸಿ ಇಡಬಾರದು. ಎರಡು ಫೋಟೋ ಅಥವಾ ವಿಗ್ರಹದ ಮಧ್ಯೆ ಅಂತರವಿರಬೇಕು. ಉರಿದ ಊದಿನಕಡ್ಡಿ ಅಥವಾ ಬಾಡಿದ ಹೂವನ್ನು ಕೂಡ ದೇವರ ಮನೆಯಲ್ಲಿ ಇಡಬೇಡಿ. ಇದ್ರಿಂದ ಮನೆಯ ಸುಖ, ಶಾಂತಿ ಹಾಳಾಗುತ್ತದೆ.