ಹಾಸನ: ಅವರೆಲ್ಲ ಪುಣ್ಯ ಕ್ಷೇತ್ರಗಳಿಗೆ ಹೋಗಿ ದೇವರ ದರ್ಶನ ಪಡೆದು ಬರುತ್ತಿದ್ದವರ ಬಾಳಲ್ಲಿ ವಿಧಿಯಾಟವೇ ಬೇರೆಯಾಗಿತ್ತು. ತಮ್ಮೂರಿಂದ ಖುಷಿಯಿಂದ ಹೋಗಿದ್ದ ಆ ಕುಟುಂಬ ಇನ್ನೇನು ಐದು ನಿಮಿಷದಲ್ಲಿ ಊರು ಸೇರಬೇಕಿತ್ತು. ಆದ್ರೆ ಹೊಂಚು ಹಾಕಿ ಕುಳಿತಿದ್ದ ಜವರಾಯ ಈ ಹದಿನಾಲ್ಕು ಜನರ ಪೈಕಿ ನಾಲ್ಕು ಮಕ್ಕಳು ಮತ್ತು ಐವರು ವಯಸ್ಕರು ಸೇರಿ ಒಟ್ಟು ಬರೋಬ್ಬರಿ ಒಂಬತ್ತು ಜನರನ್ನ ಹೊತ್ತೊಯ್ದಿದ್ದಾನೆ.
ಹೌದು, ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬಾಣಾವರ ಹೋಬಳಿಯ ಹಳ್ಳಿಕೆರೆ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ 9 ಜನ ಸಾವನ್ನಪ್ಪಿದ್ದಾರೆ. ಶನಿವಾರ ಮುಂಜಾನೆ ಕುಟುಂಬವೊಂದು ಸಂಬಂಧಿಕರೊಂದಿಗೆ ಟೆಂಪೋ ಟ್ರಾವೆಲರ್ ನಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಹಾಸನಾಂಬೆ ದರ್ಶನ ಮಾಡಿ ಸ್ವಗ್ರಾಮಕ್ಕೆ ಮೂರೇ ಕಿ.ಮಿ. ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಎದುರಿನಿಂದ ತಪ್ಪು ದಾರಿಯಲ್ಲಿ ಬಂದ ಯಮ ಸ್ವರೂಪಿ ಮಿಲ್ಕ್ ಟ್ಯಾಂಕರ್ ಗೆ 14 ಜನರಿದ್ದ ಟಿಟಿ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಒಂಬತ್ತು ಜನ ಪ್ರಾಣ ಬಿಟ್ಟಿದ್ದಾರೆ.
ಈ ಒಂಬತ್ತು ಜನರ ಪೈಕಿ ಚೈತ್ರ ಮತ್ತು ಅವರ ಎರಡು ಮುದ್ದಾದ ಮಕ್ಕಳು ಮೃತಪಟ್ಟಿವೆ. ಇವರ ಗಂಡ ಶ್ರೀನಿವಾಸ ಎಂಬುವರು ಕೂಡ ಎರಡು ವರ್ಷಗಳ ಹಿಂದೆ ಕೊರೋನಾಗೆ ಬಲಿಯಾಗಿದ್ರಂತೆ. ಅವರು ಸರ್ಕಾರಿ ಕೆಲಸದಲ್ಲಿ ಇದ್ದಿದ್ದರಿಂದ ಅವರು ಮೃತಪಟ್ಟ ನಂತರ ಆ ಕೆಲಸವನ್ನ ಚೈತ್ರಾಗೆ ಅನುಕಂಪ ಆಧಾರದ ಮೇಲೆ ನೀಡಲಾಗಿದೆ. ದೇವರ ದರ್ಶನ ಮಾಡಿ ಕೆಲಸಕ್ಕೆ ಸೇರೋಣ ಎಂದು ಆಶೀರ್ವಾದ ಪಡೆಯಲು ಹೋಗಿದ್ದ ಅವರ ಇಡೀ ಕುಟುಂಬ ಈಗ ಇಲ್ಲದಂತಾಗಿದೆ. ದೇವರ ದರ್ಶನ ಮಾಡಿ ಬಂದ ಭಕ್ತರಿಗೆ ಈ ರೀತಿ ಆದ್ರೆ ನಾವು ಯಾರನ್ನ ದೂರಬೇಕು ಎಂದು ಮೃತರ ಸಂಬಂಧಿಕರು ನೋವು ಹೊರಹಾಕುತ್ತಿದ್ದರು.