‘ದೇವರು ಮೈಮೇಲೆ ಬಂದಿದೆ’ ಎಂದು ಪೂಜಾರಿಯೊಬ್ಬ ಪೂಜೆಗೆ ಬಂದಿದ್ದ ಮಹಿಳೆಗೆ ಬೆತ್ತದಿಂದ ತೀವ್ರವಾಗಿ ಥಳಿಸಿರುವ ಘಟನೆ ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಕಿರಂಗೂರು ಗ್ರಾಮದಲ್ಲಿ ನಡೆದಿದೆ.
ಪ್ರಕರಣದ ವಿವರ: ಭಾನುವಾರದಂದು ಗ್ರಾಮದ ಸಿದ್ದಯ್ಯ ಎಂಬವರ ಮನೆಯಲ್ಲಿ ಭೈರವೇಶ್ವರ ದೇವರ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಪವಿತ್ರಾ ಎಂಬವರು ತಮ್ಮ ಪತಿ ನಟರಾಜ್ ಜೊತೆ ಆಗಮಿಸಿದ್ದರು.
ಈ ವೇಳೆ ಪೂಜಾರಿ, ತನ್ನ ಮೈಮೇಲೆ ದೇವರು ಬಂದಿದೆ ಎಂದು ಬೆತ್ತದಿಂದ ಪವಿತ್ರಾ ಅವರಿಗೆ ತೀವ್ರವಾಗಿ ಥಳಿಸಿದ್ದಾನೆ. ಇದರಿಂದ ಗಾಯಗೊಂಡಿರುವ ಪವಿತ್ರಾ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ವಿರುದ್ಧ ಮೌಡ್ಯ ಪ್ರತಿಬಂಧಕ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಆತನ ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗಿದೆ.