ಛತ್ತೀಸ್‌ಗಢದ ರಾಯಗಢ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ವಿವಾದವೊಂದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ ದೇವರಿಗೇ ನೋಟಿಸ್ ನೀಡಿದ ಪ್ರಕರಣ ಇದು. ಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕೋರ್ಟ್, ಬೋಲೆನಾಥ ದೇವರಿಗೆ ನೋಟಿಸ್ ನೀಡಿತ್ತು. ವಿಚಾರಣೆಗಾಗಿ ದೇವರ ಮೂರ್ತಿ ಕಚೇರಿಗೆ ಹಾಜರಾದ್ರೂ ಅಧಿಕಾರಿಯೇ ಬಂದಿರಲಿಲ್ಲ. ಹಾಗಾಗಿ ಮತ್ತೆ ಹೊಸ ದಿನಾಂಕದಂದು ದೇವರೇ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ.
ರಾಯಗಢ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದ ವಾರ್ಡ್ ಸಂಖ್ಯೆ 25ರ ಕೌಹಕುಂದದಲ್ಲಿ ಮಹಿಳೆಯೊಬ್ಬಳು ನಜುಲ್ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾಳಂತೆ ಅದನ್ನು ತೆರವು ಮಾಡುವಂತೆ ಛತ್ತೀಸ್ ಗಢ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಯಗಢ ತಹಸಿಲ್ ನ್ಯಾಯಾಲಯಕ್ಕೆ ಸೂಚಿಸಿತ್ತು.
ತಹಸಿಲ್ ಕೋರ್ಟ್ ಕೌಹಕುಂದದ ಶಿವಮಂದಿರಕ್ಕೇ ಶೋಕಾಸ್ ನೋಟಿಸ್ ನೀಡಿದೆ. ಸ್ಥಳೀಯರು ಶಿವಲಿಂಗವನ್ನು ಆಟೋದಲ್ಲಿ ತಹಸಿಲ್ ನ್ಯಾಯಾಲಯಕ್ಕೆ ಕರೆತಂದಿದ್ದರು. ಆದ್ರೆ ತಹಸೀಲ್ದಾರರು ಸಾರ್ವಜನಿಕರ ಅಹವಾಲು ಆಲಿಸುತ್ತಿದ್ದುದರಿಂದ ದೇವರ ವಿಚಾರಣೆ ಸಾಧ್ಯವಾಗಲೇ ಇಲ್ಲ. ಅಷ್ಟಕ್ಕೂ ದೇವರಿಗೇ ನೋಟಿಸ್ ನೀಡಿರುವುದು ಗುಮಾಸ್ತರು ಮಾಡಿದ ಪ್ರಮಾದದಿಂದ ಆಗಿದ್ದು ಅಂತಾ ತಹಸೀಲ್ದಾರ್ ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನು ಕೆಲವರ ವಿಚಾರಣೆ ನಡೆಯಲಿದ್ದು, ಎಪ್ರಿಲ್ 13ಕ್ಕೆ ದಿನಾಂಕ ನಿಗದಿಪಡಿಸಲಾಗಿದೆ.