ಚುನಾವಣೆ ಪ್ರಚಾರ, ಸಭೆಗಳು ಅಂದ್ಕೊಂಡು ರಾಜಕೀಯ ಪಕ್ಷಗಳು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತವೆ. ಇಷ್ಟೊಂದು ಹಣ ಎಲ್ಲಿಂದ ಬಂತು ಅನ್ನೋದು ಎಲ್ಲರನ್ನೂ ಕಾಡುವ ಪ್ರಶ್ನೆ. ವಾಸ್ತವವಾಗಿ ರಾಜಕೀಯ ಪಕ್ಷಗಳು ಕಾರ್ಪೊರೇಟ್ ಜಗತ್ತಿನಿಂದ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಮೌಲ್ಯದ ದೇಣಿಗೆ ಪಡೆಯುತ್ತವೆ.
ಎಲ್ಲಾ ದೊಡ್ಡ ದೊಡ್ಡ ಕಂಪನಿಗಳು ವಿವಿಧ ಪಕ್ಷಗಳಿಗೆ ಡೊನೇಶನ್ ಕೊಡುತ್ತವೆ. ದೇಣಿಗೆ ನೀಡುತ್ತಿರುವ ಸಂಸ್ಥೆಗಳಲ್ಲಿ ಕೆಲವೊಂದು ಅಪರಿಚಿತ ಹೆಸರುಗಳು ಕೂಡ ಕೇಳಿ ಬಂದಿವೆ. ರಾಜಕೀಯ ದೇಣಿಗೆ ನೀಡಿರೋ ಕಂಪನಿಗಳ ಹೆಸರನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಹಿರಂಗಪಡಿಸಿದೆ. 2019-20ರಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಪ್ರಮುಖ ಕಂಪನಿಗಳಲ್ಲಿ ಭಾರ್ತಿ ಗ್ರೂಪ್ (ಭಾರತಿ ಎಂಟರ್‌ಪ್ರೈಸಸ್) ಮತ್ತು ಐಟಿಸಿಯಂತಹ ದೊಡ್ಡ ಹೆಸರುಗಳು ಸೇರಿವೆ.
ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ದೇಣಿಗೆ ನೀಡುವುದರಲ್ಲಿ ಮುಂಚೂಣಿಯಲ್ಲಿದೆ. 2019-20ರಲ್ಲಿ ಈ ಸಂಸ್ಥೆ ರಾಜಕೀಯ ಪಕ್ಷಗಳಿಗೆ 247.75 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಈ ಟ್ರಸ್ಟ್ 429.42 ಕೋಟಿ ರೂಪಾಯಿ ದೇಣಿಗೆಯಾಗಿ ಕೊಟ್ಟಿತ್ತು. ಆಗ ಸಂಸ್ಥೆಯ ಹೆಸರು ಸತ್ಯ ಎಲೆಕ್ಟೋರಲ್ ಟ್ರಸ್ಟ್ ಎಂದಿತ್ತು. ಈ ಸಂಸ್ಥೆ 2019-20ರಲ್ಲಿ ಬಿಜೆಪಿಗೆ 216.75 ಕೋಟಿ ಮತ್ತು ಕಾಂಗ್ರೆಸ್‌ಗೆ 31 ಕೋಟಿ ನೀಡಿದೆ.
ಇದರ ಹೊರತಾಗಿ ಐಟಿಸಿ ಲಿಮಿಟೆಡ್, ಜನಕಲ್ಯಾಣ್ ಎಲೆಕ್ಟೋರಲ್ ಟ್ರಸ್ಟ್, ಬಿಜಿ ಶಿರ್ಕೆ ಕನ್ಸ್ ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಮತ್ತು ಪಂಚಶೀಲ್ ಕಾರ್ಪೊರೇಟ್ ಪಾರ್ಕ್ ಪ್ರೈವೇಟ್ ಲಿಮಿಟೆಡ್ ಕೂಡ ಚಂದಾ ನೀಡುವಿಕೆಯಲ್ಲಿ ಮುಂಚೂಣಿಯಲ್ಲಿವೆ. ಎಡಿಆರ್ ವರದಿಯ ಪ್ರಕಾರ ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷ ದೇಣಿಗೆ ಪಡೆಯುವುದರಲ್ಲಿ ಉಳಿದೆಲ್ಲಾ ಪಕ್ಷಗಳಿಗಿಂತ ಮುಂದಿದೆ.
2019-20ರ ಹಣಕಾಸು ವರ್ಷದಲ್ಲಿ ಟಾಪ್-5 ಪಕ್ಷಗಳು ಒಟ್ಟಾಗಿ 921.95 ಕೋಟಿ ರೂಪಾಯಿ ಕಾರ್ಪೊರೇಟ್ ದೇಣಿಗೆಗಳನ್ನು ಪಡೆದಿವೆ. ಈ ಪೈಕಿ 720.40 ಕೋಟಿ ರೂಪಾಯಿಗಳನ್ನು ಬಿಜೆಪಿಯೇ ಸ್ವೀಕರಿಸಿದೆ. ಉಳಿದಂತೆ ಕಾಂಗ್ರೆಸ್, ಎನ್‌ಸಿಪಿ, ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್ ಕೂಡ ದೇಣಿಗೆ ಪಡೆದಿವೆ. ಈ ಬಾರಿ ಸಿಪಿಐ ದೇಣಿಗೆ ಪಡೆದಿಲ್ಲ. ಕಾಂಗ್ರೆಸ್ 133.04 ಕೋಟಿ ಮತ್ತು ಎನ್‌ಸಿಪಿ 57.08 ಕೋಟಿ ರೂಪಾಯಿಯನ್ನು ಪಕ್ಷದ ಜೋಳಿಗೆಗೆ ಜಮಾ ಮಾಡಿಕೊಂಡಿವೆ.