ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಮತದಾರರಿಗೆ ಆಮಿಷ ಒಡ್ಡುವ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಕುಕ್ಕರ್, ಮಿಕ್ಸರ್ ಮೊದಲಾದ ಗೃಹೋಪಯೋಗಿ ಉಪಕರಣಗಳನ್ನು ವಿತರಿಸಲಾಗಿದ್ದು, ಹಣ ಹಂಚಿಕೆಯೂ ಸಹ ನಡೆದಿದೆ.
ಹೀಗಾಗಿ ಚುನಾವಣಾ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ಕಟ್ಟುನಿಟ್ಟಿನ ತಪಾಸಣಾ ಕಾರ್ಯ ಕೈಗೊಂಡಿದ್ದು, ದಾಖಲೆ ಇಲ್ಲದೆ ಹಣ ಸಾಗಿಸುತ್ತಿರುವ ಹಲವು ಪ್ರಕರಣಗಳು ಬಹಿರಂಗವಾಗಿವೆ. ಇದೀಗ ಇಂಥವುದೇ ಮತ್ತೊಂದು ಪ್ರಕರಣ ಉಡುಪಿ ಜಿಲ್ಲೆಯಲ್ಲಿ ಪತ್ತೆಯಾಗಿದೆ.
ಮಂಗಳೂರಿಂದ ಉಡುಪಿ ಕಡೆ ತೆರಳುತ್ತಿದ್ದ ಕಾರನ್ನು ಹೆಜಮಾಡಿ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ತಡೆದು ಪರಿಶೀಲನೆ ನಡೆಸಿದ ವೇಳೆ ಚಾಲಕನ ಎಡಬದಿಯ ಟೂಲ್ ಬಾಕ್ಸ್ ಒಳಗಡೆ ಕೇಸರಿ ಬಣ್ಣದ ದೇಗುಲ ಪ್ರಸಾದ ಕವರ್ ಕಂಡುಬಂದಿದ್ದು ಅದನ್ನು ತೆರೆದು ನೋಡಿದಾಗ 500 ಮುಖಬೆಲೆಯ 5 ಲಕ್ಷ ರೂಪಾಯಿ ಪತ್ತೆಯಾಗಿದೆ. ಇದೀಗ ಕಾರು ಹಾಗೂ ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.