ತನ್ನ ಬಾಯ್ ಫ್ರೆಂಡ್ ಅಫ್ತಾಬ್ ಅಮೀನ್ ಪೂನಾವಾಲಾನಿಂದ ಹತ್ಯೆಗೀಡಾದ ಶ್ರದ್ಧಾ ವಾಕರ್ ಎರಡು ವರ್ಷಗಳ ಹಿಂದೆ ಆಂತರಿಕವಾಗಿ ಗಾಯಗೊಂಡು ( ಇಂಟರ್ನಲ್ ಇಂಜುರಿ) ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
26 ವರ್ಷದ ಕಾಲ್ ಸೆಂಟರ್ ಕೆಲಸಗಾರ್ತಿ ಶ್ರದ್ಧಾ ವಾಕರ್ ಅವರು 2020 ರ ಡಿಸೆಂಬರ್ 3 ಮತ್ತು 6 ರ ನಡುವೆ ಮುಂಬೈ ಬಳಿಯ ವಸೈನಲ್ಲಿರುವ ಆಸ್ಪತ್ರೆಯಲ್ಲಿದ್ದರು.
ಶ್ರದ್ಧಾ ಅವರ ಸ್ನೇಹಿತೆ ಹಂಚಿಕೊಂಡಿರುವ ಫೋಟೋದಲ್ಲಿ ಆಕೆಯ ಮೂಗು, ಕೆನ್ನೆ ಮತ್ತು ಕುತ್ತಿಗೆಯ ಮೇಲೆ ಮೂಗೇಟುಗಳಿವೆ ಎಂದು ತೋರಿಸಿದೆ. ಆದರೆ ಇದು ಆಕೆಯನ್ನು ಆಸ್ಪತ್ರೆಗೆ ಸೇರಿಸಿದಾಗ ತೆಗೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
2020 ರಲ್ಲಿ ಶ್ರದ್ಧಾಗೆ ಅಫ್ತಾಬ್ ಥಳಿಸಿದ ಬಗ್ಗೆ ದೂರು ನೀಡಲು ಪೊಲೀಸರಿಗೆ ಹೋದಾಗ ತೆಗೆದ ಫೋಟೋ ಎಂದು ಆಕೆಯ ಸ್ನೇಹಿತ ರಾಹುಲ್ ರೈ ಹೇಳಿದ್ದಾರೆ. ನಾನು ಅವಳನ್ನು ಪೊಲೀಸರ ಬಳಿ ಕರೆದೊಯ್ದೆ. ಎರಡು-ಮೂರು ಬಾರಿ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಆಕೆಯ ಕುತ್ತಿಗೆಯ ಮೇಲೆ ಆಳವಾದ ಗುರುತು ಇತ್ತು, ಅವನು ಅವಳ ಕತ್ತು ಹಿಸುಕಲು ಪ್ರಯತ್ನಿಸಿದ್ದನಂತೆ. ಆಕೆ ಭಯಭೀತಳಾಗಿದ್ದರೂ ಪೊಲೀಸರು ಶ್ರದ್ಧಾಳನ್ನು ಮನೆಗೆ ಹೋಗುವಂತೆ ಮನವೊಲಿಸಿದರು ಎಂದು ರಾಹುಲ್ ರೈ ಹೇಳಿದರು.
ಆ ವರ್ಷ ಡಿಸೆಂಬರ್ನಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ದೇಹದ ಮೇಲೆ ಯಾವುದೇ ಗಾಯಗಳಿರಲಿಲ್ಲ. ಆದರೆ ವೈದ್ಯರು ಆಕೆಗೆ ತೀವ್ರವಾದ ಬೆನ್ನು ನೋವು ಮತ್ತು ಆಂತರಿಕ ಗಾಯಗಳಿದ್ದು ಅದು ಮನೆಯಲ್ಲಿ ಬಿದ್ದಿರುವುದರಿಂದ ಅಥವಾ ಹಲ್ಲೆಯಿಂದ ಆಗಿರಬಹುದೆಂದು ಸೂಚಿಸಿದ್ದರು ಎಂದು ರಾಹುಲ್ ರೈ ಹೇಳಿದ್ದಾರೆ.
ಆಕೆ ನಿತ್ಯ ಕೌಟುಂಬಿಕ ಹಿಂಸೆ ಅನುಭವಿಸುತ್ತಿದ್ದಳು ಎಂದು ಶ್ರದ್ಧಾ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ.