ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಓಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕಳೆದ 2 ದಿನಗಳಲ್ಲಿ ದೆಹಲಿಯಲ್ಲಿ ವರದಿಯಾದ ಕೊರೊನಾ ವೈರಸ್ ಪ್ರಕರಣಗಳಲ್ಲಿ 84 ಪ್ರತಿಶತದಷ್ಟು ಓಮಿಕ್ರಾನ್ ರೂಪಾಂತರಿಯೇ ಆಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮಾಹಿತಿ ನೀಡಿದ್ದಾರೆ.
ದೆಹಲಿಯು ಇಂದು ಸುಮಾರು 4000 ಪ್ರಕರಣಗಳನ್ನು ವರದಿ ಮಾಡುವ ಸಾಧ್ಯತೆ ಇದೆ. ಪಾಸಿಟಿವಿಟಿ ದರವು 6.5 ಪ್ರತಿಶತಕ್ಕೆ ಏರಿಕೆಯಾಗಿದೆ. ಪ್ರಸ್ತುತ 202 ಕೊರೊನಾ ಓಮಿಕ್ರಾನ್ ಸೋಂಕಿತರನ್ನು ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ ಎಂದು ಸತ್ಯೇಂದ್ರ ಜೈನ್ ಹೇಳಿದ್ದಾರೆ.
ದೆಹಲಿಯಲ್ಲಿ ಭಾನುವಾರದಂದು 2021ರ ಮೇ 20ನೇ ತಾರೀಖಿನ ಬಳಿಕ ಅತೀ ಹೆಚ್ಚು ಏಕದಿನದ ಹೊಸ ಪ್ರಕರಣಗಳು ದಾಖಲಾಗಿದೆ. ಕೇವಲ ಒಂದು ದಿನದಲ್ಲಿ ದೆಹಲಿಯಲ್ಲಿ 3194 ಹೊಸ ಪ್ರಕರಣಗಳು ವರದಿಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಪಾಸಿಟಿವಿಟಿ ದರವು 4.59 ಪ್ರತಿಶತದಷ್ಟಾಗಿದೆ. ಇದು ಮೇ 20ರ ಬಳಿಕ ದಾಖಲಾದ ಅತೀ ಹೆಚ್ಚಿನ ಪ್ರಮಾಣದ ಪಾಸಿಟಿವಿಟಿ ದರವಾಗಿದೆ.
ಈ ನಡುವೆ ದೇಶದ 23 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾದ ಕೋವಿಡ್ ಓಮಿಕ್ರಾನ್ ಪ್ರಕರಣದ ಒಟ್ಟು ಸಂಖ್ಯೆ 1700 ಆಗಿದೆ. ಇದರಲ್ಲಿ 639 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.