ನವದೆಹಲಿ: ದೆಹಲಿಯಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗಿದ್ದರ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರವು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿತ್ತು. ಆದರೆ, ಮೂರನೇ ಅಲೆಯಲ್ಲಿ ಸೋಂಕಿನ ತೀವ್ರತೆ ಕಡಿಮೆಯಿರುವ ಕಾರಣ ಹಾಗೂ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಅದನ್ನು ಹಿಂಪಡೆಯುವ ನಿರ್ಧಾರ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಇದಕ್ಕೆ ಅಲ್ಲಿನ ಗವರ್ನರ್ ವಿರೋಧಿಸಿದ್ದಾರೆ.
ದೆಹಲಿ ಸರ್ಕಾರವು ವಾರಾಂತ್ಯ ಕರ್ಫ್ಯೂ ರದ್ದು ಮಾಡಿ, ಸಮ- ಬೆಸ ಸಂಖ್ಯೆಯಡಿ ವ್ಯವಸ್ಥೆ ಕಲ್ಪಿಸಲು ಮುಂದಾಗಿತ್ತು. ಈ ಪ್ರಸ್ತಾವಕ್ಕೆ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅಸಮ್ಮತಿ ಸೂಚಿಸಿದ್ದಾರೆ.
ಇತ್ತೀಚೆಗಷ್ಟೇ ದೆಹಲಿ ಸರ್ಕಾರ ಈ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದು, ಅಲ್ಲಿನ ಕಚೇರಿ ಹಾಗೂ ಅಂಗಡಿ – ಮುಂಗಟ್ಟುಗಳನ್ನು ಶೇ.50ರಷ್ಟು ತೆರೆಯಲು ಅನುಮತಿ ನೀಡಲು ನಿರ್ಧರಿಸಲಾಗುತ್ತಿತ್ತು. ಆದರೆ, ಇದಕ್ಕೆ ಲೆಫ್ಟಿನೆಂಟ್ ಗವರ್ನರ್ ವಿರೋಧಿಸಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದಕ್ಕೆ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆ 5ರ ವರೆಗೆ ಕರ್ಫ್ಯೂ ಜಾರಿಯಲ್ಲಿದೆ. ಸದ್ಯ ಅಲ್ಲಿ ಸೋಂಕಿತರ ಸಂಖ್ಯೆ ಪ್ರತಿ ದಿನ 15 ಸಾವಿರದ ಆಸುಪಾಸಿಗೆ ಬಂದು ನಿಂತಿದೆ.