ನವದೆಹಲಿ : ದೇಶದಲ್ಲಿ ಮತ್ತೆ ಕೊರೊನಾ ಆತಂಕ ಮನೆ ಮಾಡುತ್ತಿದ್ದು, ಮಹಾರಾಷ್ಟ್ರದಂತೆ ದೆಹಲಿಯಲ್ಲಿ ಕೂಡ ಕೊರೊನಾ ಸ್ಫೋಟವಾಗುತ್ತಿದೆ.
ದೆಹಲಿಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಶೇ.36ರಷ್ಟು ಏರಿಕೆಯಾಗಿದ್ದು, ಶುಕ್ರವಾರ ಅಲ್ಲಿ 1796 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಳೆದ ನಾಲ್ಕೈದು ದಿನಗಳಿಂದ ಅಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ.
ದೆಹಲಿಯಲ್ಲಿ ಗುರುವಾರ 1313 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅಲ್ಲದೇ, ಶೇ.54ರಷ್ಟು ಪ್ರಕರಣಗಳು ಓಮಿಕ್ರಾನ್ ದ್ದಾಗಿವೆ. ಹೀಗಾಗಿ ದೆಹಲಿಯಲ್ಲಿ ಹಲವು ಕಟ್ಟೆಚ್ಚರಗಳನ್ನು ವಹಿಸಲಾಗುತ್ತಿದ್ದು, ಅಲ್ಲಿ ಸದ್ಯ ಪಾಸಿಟಿವಿಟಿ ದರ ಶೇ.2.44ಕ್ಕೆ ತಲುಪಿದೆ.
ಕೊರೊನಾ ಹಾಗೂ ಹೊಸ ರೂಪಾಂತರಿ ಓಮಿಕ್ರಾನ್ ನ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದ್ದಾರೆ. ಶಾಲೆ- ಕಾಲೇಜು ಹಾಗೂ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಸಭೆ – ಸಮಾರಂಭಗಳನ್ನು ನಡೆಸದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಒಮಿಕ್ರಾನ್ ಆತಂಕದ ಮಧ್ಯೆ ಕೊರೊನಾ ಕುರಿತು ತಜ್ಞರಿಂದ ಗುಡ್ ನ್ಯೂಸ್
ಹಿಂದಿನ ವಾರದವರೆಗೆ ದೆಹಲಿಯಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು 200ಕ್ಕಿಂತ ಕಡಿಮೆಯಲ್ಲಿ ಕಂಡು ಬರುತ್ತಿದ್ದವು. ಆದರೆ, ಒಂದೇ ವಾರದಲ್ಲಿ ಅಲ್ಲಿ ಪರಿಸ್ಥಿತಿ ಮತ್ತೆ ಕೈ ಮೀರುತ್ತಿದ್ದು, ಸಾವಿರದ ಗಡಿ ದಾಟುತ್ತಿದೆ. ಹೀಗಾಗಿ ಮತ್ತೆ ಲಾಕ್ ಡೌನ್ ಮಾಡುವ ಭಯ ಹಾಗೂ ಆತಂಕ ಶುರುವಾಗಿದೆ.
ಅದೇ ರೀತಿ ಮುಂಬಯಿನಲ್ಲಿ ಕೂಡ ಪರಿಸ್ಥಿತಿ ಕೈ ಮೀರುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಅಲ್ಲಿ 5428 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಅಲ್ಲಿ ಕೂಡ ಲಾಕ್ ಡೌನ್ ಮಾಡುವ ಮಾತುಗಳು ಕೇಳಿ ಬರುತ್ತಿವೆ. ಇನ್ನೊಂದೆಡೆ ದೇಶದಲ್ಲಿ ಓಮಿಕ್ರಾನ್ ಕೂಡ ಹೆಚ್ಚಳವಾಗುತ್ತಿದ್ದು, 1200ಕ್ಕೂ ಅಧಿಕ ಜನರಲ್ಲಿ ಹೊಸ ರೂಪಾಂತರಿ ಕಂಡು ಬಂದಿದೆ.