ಕೆಲಸ, ಮನೆ, ಮದುವೆ, ಮಕ್ಕಳು ಹೀಗೆ ಬೇರೆ ಬೇರೆ ಕಾರಣಕ್ಕೆ ಸಂಗಾತಿಗಳು ದೂರವಿರಬೇಕಾದ ಪ್ರಸಂಗ ಬರುತ್ತದೆ. ದೂರವಿದ್ದು ಸಂಬಂಧ ನಿಭಾಯಿಸುವುದು ಕಷ್ಟ. ಸಂಬಂಧದಲ್ಲಿ ನಿರಾಸಕ್ತಿ, ಅನುಮಾನಗಳು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಸಂಗಾತಿಯನ್ನು ಎಷ್ಟೇ ಪ್ರೀತಿ ಮಾಡ್ಲಿ ದೂರವಿದ್ದವರು ಸಂಬಂಧ ಉಳಿಸಿಕೊಳ್ಳಲು ಕೆಲವೊಂದು ಪ್ರಯತ್ನಗಳನ್ನು ನಿರಂತರವಾಗಿ ಮಾಡಬೇಕು. ಇಲ್ಲವಾದ್ರೆ ಸಂಬಂಧ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಎಲ್ಲರ ಕೈನಲ್ಲೂ ಮೊಬೈಲ್, ಇಂಟರ್ನೆಟ್ ಇದ್ದೆ ಇರುತ್ತದೆ. ಸಮಯ ಸಿಕ್ಕಾಗ ವಾಯ್ಸ್ ಕಾಲ್, ವಿಡಿಯೋ ಕಾಲ್ ಗಳ ಲಾಭವನ್ನು ಪಡೆದುಕೊಳ್ಳಬೇಕು. ದೂರವಿರುವ ಸಂಗಾತಿಗೆ ನಿಮ್ಮ ಜೀವನದಲ್ಲಿ ಏನೆಲ್ಲ ಆಗ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿ. ಸಂಗಾತಿಗೆ ನಿಮ್ಮ ಬಗ್ಗೆ ಸಂಪೂರ್ಣ ತಿಳಿದಿರಲಿ. ದೂರವಿದ್ದೇವೆನ್ನುವ ಕಾರಣಕ್ಕೆ ಯಾವುದ್ರಲ್ಲೂ ಮುಚ್ಚುಮರೆ ಬೇಡ. ಪ್ರತಿಯೊಂದು ಕೆಲಸ ಮಾಡುವ ಮುನ್ನ ಪರಸ್ಪರ ಚರ್ಚಿಸಿ ಹೆಜ್ಜೆಯಿಡಿ.
ವಿಡಿಯೋ ಕರೆ ಮಾಡಿ ಮುಖ ನೋಡಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ. ಮಾತಿನಲ್ಲೇ ಪ್ರೀತಿ ವ್ಯಕ್ತಪಡಿಸಿ. ಒಟ್ಟಿಗಿರುವ ರೀತಿಯಲ್ಲೇ ವಿಡಿಯೋ ಕಾಲ್ ಬಳಸಿ ಇಬ್ಬರೂ ಅಡುಗೆ ಮಾಡಿ. ಇದು ಸಣ್ಣ ವಿಷ್ಯವೆನಿಸಿದ್ರೂ ಸಂಬಂಧ ಗಟ್ಟಿಗೊಳಿಸುವಲ್ಲಿ ದೊಡ್ಡ ಕೆಲಸ ಮಾಡುತ್ತದೆ.
ಫೋನ್ ನಲ್ಲಿ ಮಾತನಾಡಲು ಸಮಯವಿಲ್ಲವೆಂದಾದ್ರೆ ಮೆಸ್ಸೇಜ್, ಫೋಟೋ, ವಿಡಿಯೋ ಕಳಿಸುತ್ತಿರಿ. ಅವ್ರ ಸುಖ-ದುಃಖದಲ್ಲಿ ಭಾಗಿಯಾಗಿ. ಕಷ್ಟದ ದಿನಗಳಲ್ಲಿ ನಿಮ್ಮ ಜೊತೆ ನಾನಿದ್ದೇನೆ ಎಂಬುದನ್ನು ತಿಳಿಸಿ ಹೇಳಿ.