ಸತು ಅಥವಾ ಝಿಂಕ್ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನೇಕ ಸಂಶೋಧನೆಗಳಲ್ಲಿ ಇದು ದೃಢಪಟ್ಟಿದೆ. ಸತುವಿನ ಅಂಶವುಳ್ಳ ಪದಾರ್ಥಗಳ ಸೇವನೆಯಿಂದ ದೇಹದ ಚಯಾಪಚಯವು ಸ್ಥಿರವಾಗಿರುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತದೆ.
ನಮ್ಮ ಆಹಾರದಲ್ಲಿ ಸತುವಿನ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಜ್ವರ ಮತ್ತು ಇತರ ಕಾಯಿಲೆಗಳಿಂದ ದೇಹವನ್ನು ರಕ್ಷಿಸಬಹುದು. ಪದೇ ಪದೇ ಅನಾರೋಗ್ಯಕ್ಕೀಡಾಗದಂತೆ ಇದು ನಮ್ಮನ್ನು ಕಾಪಾಡುತ್ತದೆ. ಹಾಗಾಗಿ ಸತುವಿನ ಅಂಶವುಳ್ಳ ಕೆಲವೊಂದು ನಿರ್ದಿಷ್ಟ ಆಹಾರಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು.
ಮೊಟ್ಟೆ: ಮೊಟ್ಟೆ ಸತುವಿನ ಅತ್ಯುತ್ತಮ ಮೂಲವಾಗಿದೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಶೇ.5ರಷ್ಟು ಸತು ಪೂರೈಕೆಯಾಗುತ್ತದೆ. ಇದಲ್ಲದೆ ಮೊಟ್ಟೆಗಳಲ್ಲಿ ಕ್ಯಾಲೋರಿಗಳು ಮತ್ತು ಪ್ರೋಟೀನ್‌ಗಳು ಉತ್ತಮ ಪ್ರಮಾಣದಲ್ಲಿರುತ್ತವೆ. ಆರೋಗ್ಯ ತಜ್ಞರ ಪ್ರಕಾರ ವಿಟಮಿನ್ ಬಿ ಸೇರಿದಂತೆ ಇತರ ಪೋಷಕಾಂಶಗಳ ಕೊರತೆಯನ್ನು ಮೊಟ್ಟೆ ಪೂರೈಸುತ್ತದೆ.
ನಟ್ಸ್: ನೀವು ಮೊಟ್ಟೆಗಳನ್ನು ತಿನ್ನಲು ಇಷ್ಟಪಡದೇ ಇದ್ದರೆ ನಟ್ಸ್ ಸೇವಿಸಿ. ಇವು ಕೂಡ ಉತ್ತಮ ಆಯ್ಕೆಯಾಗಿವೆ. ನಟ್ಸ್ ತಿನ್ನುವುದರಿಂದ ದೇಹದಲ್ಲಿ ಸತುವಿನ ಕೊರತೆ ನಿವಾರಣೆಯಾಗುತ್ತದೆ. ಕ್ಯಾನ್ಸರ್ ಮತ್ತು ಹೃದ್ರೋಗದಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಸಹ ಇವು ಕಡಿಮೆ ಮಾಡುತ್ತವೆ.
ಕಲ್ಲಂಗಡಿ ಬೀಜ: ಕಲ್ಲಂಗಡಿ ಬೀಜಗಳಲ್ಲಿ ಸತು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ಪೊಟ್ಯಾಸಿಯಮ್ ಮತ್ತು ತಾಮ್ರ ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳ ನಿಧಿಯಾಗಿದೆ. ಇದನ್ನು ಪುಡಿಮಾಡಿ ಆಹಾರದೊಂದಿಗೆ ಬೆರೆಸಿ ಬಳಸಬಹುದು. ಇದು ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ಹೃದಯದ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.
ಬೇಳೆಕಾಳು: ಸತುವು ಬೇಳೆಕಾಳುಗಳಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಬೇಳೆಕಾಳುಗಳು ಪ್ರೋಟೀನ್, ಫೈಬರ್ ಮತ್ತು ವಿಟಮಿನ್‌ಗಳ ಉತ್ತಮ ಮೂಲವಾಗಿವೆ. ಕೊಬ್ಬು ಕಡಿಮೆ ಪ್ರಮಾಣದಲ್ಲಿರುವುದರಿಂದ ಬೇಳೆಕಾಳುಗಳನ್ನು ತಪ್ಪದೇ ಸೇವಿಸಿ.