ಬಹುನಿರೀಕ್ಷಿತ ಏಷ್ಯಾ ಕಪ್ ಕ್ರಿಕೆಟ್ ಸರಣಿಗೆ ಇನ್ನೆರಡೇ ದಿನಗಳು ಬಾಕಿ ಇವೆ. ವಿವಿಎಸ್ ಲಕ್ಷ್ಮಣ್ ಸಾರಥ್ಯದಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಅಭ್ಯಾಸದಲ್ಲಿ ತೊಡಗಿಕೊಂಡಿತ್ತು. ಆಗಸ್ಟ್ 24ರಂದು ಯುಎಇಗೆ ಬಂದಿಳಿದ ಟೀಂ ಇಂಡಿಯಾ ಆಟಗಾರರು ಕಾಲಹರಣ ಮಾಡದೇ ಅಭ್ಯಾಸ ಆರಂಭಿಸಿದ್ದರು.
ಈಗಾಗ್ಲೇ ಪಾಕಿಸ್ತಾನ ತಂಡ ಕೂಡ ದುಬೈಗೆ ಬಂದಿಳಿದಿದೆ. ದುಬೈ ಮೈದಾನದಲ್ಲಿ ಉಭಯ ತಂಡಗಳ ಆಟಗಾರರು ಮುಖಾಮುಖಿಯಾಗಿದ್ದಾರೆ. ಪಾಕ್ ತಂಡದ ನಾಯಕ ಬಾಬರ್ ಅಝಂ ಹಾಗೂ ವಿರಾಟ್ ಕೊಹ್ಲಿ ಭೇಟಿ ಬಗ್ಗೆ ಎಲ್ಲರಲ್ಲೂ ಕುತೂಹಲವಿತ್ತು.
ಬಾಬರ್ ಹಾಗೂ ವಿರಾಟ್ ಪರಸ್ಪರ ಹಸ್ತಲಾಘವ ಮಾಡಿಕೊಂಡಿದ್ದಾರೆ. ವಿರಾಟ್ ನಸುನಗುತ್ತಲೇ ಬಾಬರ್ ಜೊತೆ ಸಂಭಾಷಣೆ ನಡೆಸಿರುವ ವಿಡಿಯೋ ಈಗ ವೈರಲ್ ಆಗಿದೆ. ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ, ಕೊಹ್ಲಿಗೆ ಬೆಂಬಲ ವ್ಯಕ್ತಪಡಿಸಿದ್ದ ಬಾಬರ್ ಅಝಂ, ಸದ್ಯದಲ್ಲೇ ಎಲ್ಲವೂ ಸರಿಹೋಗಲಿದೆ ಅಂತಾ ಟ್ವೀಟ್ ಮಾಡಿದ್ದರು.
ಇದಕ್ಕೆ ಧನ್ಯವಾದ ಹೇಳಿದ್ದ ಕೊಹ್ಲಿ, ಪಾಕ್ ನಾಯಕನಿಗೂ ಶುಭ ಕೋರಿದ್ದರು. ಉಭಯ ಆಟಗಾರರ ಪಾಲಿಗೆ ಆಗಸ್ಟ್ 28ರ ಪಂದ್ಯ ಅತ್ಯಂತ ಮಹತ್ವದ್ದು. ಬಹಳ ದಿನಗಳಿಂದ ಫಾರ್ಮ್ ಕಳೆದುಕೊಂಡಿರೋ ಕೊಹ್ಲಿ ಮತ್ತೆ ತಮ್ಮ ಬ್ಯಾಟಿಂಗ್ ವೈಭವಕ್ಕೆ ಮರಳಲು ಇರುವ ಸದಾವಕಾಶ.
ಇಂಗ್ಲೆಂಡ್ ಪ್ರವಾಸದ ಬಳಿಕ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ಪ್ರವಾಸದಿಂದ ವಿರಾಟ್‌ರನ್ನು ಕೈಬಿಡಲಾಗಿತ್ತು. ಆಗಸ್ಟ್ 28ರ ಪಂದ್ಯದಲ್ಲಿ ಕೊಹ್ಲಿ ಫಾರ್ಮ್‌ಗೆ ಮರಳಿದ್ರೆ ಭಾರತಕ್ಕೆ ಗೆಲುವು ಸುಲಭವಾಗಲಿದೆ.