ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಹಾಗಾಗಿ ಈಗ ಸ್ವಂತ ವಾಹನ ಇಟ್ಕೊಳ್ಳೋದು ಬಹಳ ಕಷ್ಟ. ಅದರಲ್ಲೂ ಬಡ ಮತ್ತು ಮಧ್ಯಮವರ್ಗದವರು ವಾಹನಗಳ ಹೊಟ್ಟೆ ತುಂಬಿಸಲಾಗದೇ ಪರದಾಡುವಂಥ ಪರಿಸ್ಥಿತಿ ಇದೆ.
ಟ್ಯಾಕ್ಸಿ ಚಾಲಕರಿಗೂ ತೈಲ ಬೆಲೆ ಏರಿಕೆ ಭಾರೀ ಹೊಡೆತ ನೀಡ್ತಿದೆ. ಹಾಗಾಗಿ ಕೆಲವು ಸುಲಭವಾದ ಸಲಹೆ ಮತ್ತು ತಂತ್ರಗಳನ್ನು ಅಳವಡಿಸಿಕೊಂಡು ಪೆಟ್ರೋಲ್ ಹಾಗೂ ಡೀಸೆಲ್ ಉಳಿತಾಯ ಮಾಡಲು ಎಲ್ಲರೂ ಮುಂದಾಗಬೇಕು. ಹೀಗೆ ಮಾಡಿದ್ರೆ ಖರ್ಚನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.
ಎಸಿ ಬಳಕೆಯನ್ನು ಕಡಿಮೆ ಮಾಡಿ…
ಬೇಸಿಗೆಯಲ್ಲಿ ನಮಗೆಲ್ಲರಿಗೂ ಏರ್ ಕಂಡಿಷನರ್ ಅಗತ್ಯವಿದೆ, ಅದರಲ್ಲೂ ಕಾರಿನಲ್ಲಿ ಎಸಿ ಬೇಕೇ ಬೇಕು. ಹಾಗಾಗಿ ನಾವು ಎಸಿಯನ್ನು ನಿರಂತರವಾಗಿ ಆನ್ ಮಾಡುತ್ತೇವೆ. ಹೀಗೆ ಮಾಡುವ ಬದಲು ಕಾರಿನ ಕ್ಯಾಬಿನ್ ತಣ್ಣಗಾದಾಗ ಎಸಿ ಆಫ್ ಮಾಡಿ. ಮತ್ತೆ ಸೆಖೆಯಾಗಲು ಶುರುವಾದ ಬಳಿಕ ಎಸಿ ಆನ್ ಮಾಡಿ. ಹೀಗೆ ಮಾಡಿದ್ರೆ ನೀವು ಇಂಧನ ಉಳಿತಾಯ ಮಾಡಬಹುದು.
ರೆಡ್ ಸಿಗ್ನಲ್ ಬಿದ್ದಾಗ ಎಂಜಿನ್ ಆಫ್ ಮಾಡಿ…
ಟ್ರಾಫಿಕ್ ಸಿಗ್ನಲ್‌ನಲ್ಲಿ ಕೆಲವೊಮ್ಮೆ ನಾಲ್ಕೈದು ನಿಮಿಷ ಕಾಯಬೇಕಾಗುತ್ತದೆ. ರೆಡ್ ಸಿಗ್ನಲ್ ಇದ್ದಾಗ 10 ಸೆಕೆಂಡುಗಳಿಗಿಂತ ಹೆಚ್ಚು ಕಾಯಬೇಕಾದರೆ ನೀವು ತಕ್ಷಣ ವಾಹನದ ಎಂಜಿನ್ ಆಫ್ ಮಾಡಬೇಕು. ಈ ರೀತಿ ಮಾಡುವುದರಿಂದ ಪೆಟ್ರೋಲ್ ಸೇವ್ ಆಗುತ್ತದೆ.
ಓವರ್ ಲೋಡ್ ಮಾಡಬೇಡಿ…
ಕಾರಿನಲ್ಲಿ ಹೆಚ್ಚಿನ ತೂಕವನ್ನು ಹಾಕಿದ್ರೆ ಎಂಜಿನ್ ಮೇಲೆ ಹೆಚ್ಚು ಹೊಡೆತ ಬೀಳುತ್ತದೆ. ಪರಿಣಾಮ ಹೆಚ್ಹೆಚ್ಚು ಇಂಧನ ಬೇಕಾಗುತ್ತದೆ. ಹಾಗಾಗಿ ವಾಹನದೊಳಗೆ ಅನಗತ್ಯ ಬಿಡಿಭಾಗಗಳನ್ನು ಹಾಕದಂತೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ಇವುಗಳಿಂದ ವಾಹನದ ತೂಕ ಹೆಚ್ಚಾಗುತ್ತದೆ. ಕಾರನ್ನು ಏರೋಡೈನಾಮಿಕ್ಸ್ ಪ್ರಕಾರ ತಯಾರಿಸಲಾಗುತ್ತದೆ. ಇದು ಕಾರಿನ ಮೇಲೆ ಗಾಳಿಯ ಒತ್ತಡವನ್ನು ಹೆಚ್ಚಿಸುತ್ತದೆ. ಇದರಿಂದ ಕಾರಿನ ಮೈಲೇಜ್ ಕಡಿಮೆಯಾಗುತ್ತದೆ.ನಿಮ್ಮ ಕಾರಿನಲ್ಲಿ ಪ್ರತ್ಯೇಕವಾಗಿ ಸ್ಥಾಪಿಸಲಾದ ರೂಫ್ ಬಾರ್‌ಗಳು, ಬಾಕ್ಸ್‌ಗಳು ಮತ್ತು ಫ್ಲ್ಯಾಗ್‌ಗಳು ನಿಮ್ಮ ಕಾರಿನ ಏರೋಡೈನಾಮಿಕ್ಸ್‌ನ ಪರಿಣಾಮವನ್ನು ಕಡಿಮೆ ಮಾಡುತ್ತದೆ, ಆದ್ದರಿಂದ ಉತ್ತಮ ಮೈಲೇಜ್‌ಗಾಗಿ, ಕಾರಿನಲ್ಲಿ ಪ್ರತ್ಯೇಕ ಮೈಲೇಜ್ ಡಿಗ್ರೇಡಿಂಗ್ ಐಟಂ ಅನ್ನು ಹಾಕಬೇಡಿ.
ಕ್ರೂಸ್ ನಿಯಂತ್ರಣ ಬಳಸಿ…
ನಿಮ್ಮ ಕಾರಿನಲ್ಲಿ ಕ್ರೂಸ್ ನಿಯಂತ್ರಣ ವ್ಯವಸ್ಥೆ ಇದ್ದರೆ ಅದನ್ನು ಬಳಸಿ. ಇದರಿಂದ ಕಾರು ಸ್ಥಿರ ವೇಗದಲ್ಲಿ ಚಲಿಸುತ್ತದೆ ಮತ್ತು ಮೈಲೇಜ್ ಸುಧಾರಿಸುತ್ತದೆ. ಪರಿಣಾಮ ದೂರ ಪ್ರಯಾಣದಲ್ಲಿ ಪೆಟ್ರೋಲ್ ಉಳಿತಾಯ ಮಾಡಬಹುದು.
ಏರ್ ಫಿಲ್ಟರ್ ಬದಲಾಯಿಸುತ್ತಿರಿ…
ಕಾರಿನ ಏರ್ ಫಿಲ್ಟರ್ ಕೊಳಕಾಗಿದ್ದರೆ, ಸರಿಯಾಗಿ ಕೆಲಸ ಮಾಡದೇ ಇದ್ದರೆ ಎಂಜಿನ್‌ನಲ್ಲಿ ಅನಗತ್ಯ ಒತ್ತಡ ಸೃಷ್ಟಿಯಾಗುತ್ತದೆ. ಮೈಲೇಜ್ ಕಡಿಮೆಯಾಗುತ್ತದೆ. ಆಗಾಗ ಕಾರಿನ ಫಿಲ್ಟರ್ ಬದಲಾಯಿಸುತ್ತಿದ್ದರೆ, ಎಂಜಿನ್‌ಗೆ ಸರಿಯಾದ ಗಾಳಿಯ ಹರಿವು ಲಭ್ಯವಾಗಿ, ಒಳ್ಳೆ ಮೈಲೇಜ್ ನೀಡುತ್ತದೆ.
ಟೈರ್ ಒತ್ತಡ ಮತ್ತು ವೇಗದ ಮಿತಿಗಳನ್ನು ನಿರ್ವಹಿಸಿ…
ವಾಹನಕ್ಕೆ ಶಿಫಾರಸು ಮಾಡಲಾದ ಟೈರ್ ಒತ್ತಡವನ್ನು ನೀವು ನಿರ್ವಹಿಸಿದರೆ ಇಂಧನ ದಕ್ಷತೆಯಲ್ಲಿ ಗಮನಾರ್ಹ ಹೆಚ್ಚಳ ಕಾಣಬಹುದು. ಕಡಿಮೆ ಟೈರ್ ಒತ್ತಡವು ಎಂಜಿನ್ ಮೇಲೆ ಹೆಚ್ಚಿನ ಒತ್ತಡ ಹಾಕುತ್ತದೆ. ಇದನ್ನೆಲ್ಲ ತಪ್ಪದೇ ಅನುಸರಿಸಿದ್ರೆ ನೀವು ಪ್ರತಿ ತಿಂಗಳು ಬಹಳಷ್ಟು ಪೆಟ್ರೋಲ್ ಉಳಿಸಬಹುದು.