ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ಹಾಸನಾಂಬೆ ದೇವಾಲಯದ ಬಾಗಿಲನ್ನು ಗುರುವಾರದಂದು ತೆರೆಯಲಾಗಿದ್ದು, ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಶಾಸಕ ಪ್ರೀತಂ ಗೌಡ, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮೊದಲಾದವರು ಹಾಜರಿದ್ದರು.
ಗರ್ಭಗುಡಿ ಬಾಗಿಲು ತೆರೆಯುವ ವೇಳೆ ತಳವಾರ ವಂಶದ ನಂಜರಾಜ ಅರಸ್ ಬಾಗಿಲ ಎದುರು ನೆಡಲಾಗಿದ್ದ ಬಾಳೆ ಕಂದನ್ನು ಕಡಿದು ದೇವಿಯ ದೃಷ್ಟಿ ನಿವಾರಿಸಿದ್ದು, ಬಳಿಕ ಸಚಿವರು ಮತ್ತು ಇತರೆ ಗಣ್ಯರು ಅರ್ಚಕರೊಂದಿಗೆ ಗರ್ಭಗುಡಿಯ ಒಳಗೆ ಪ್ರವೇಶಿಸಿದ್ದಾರೆ.
ಈ ವೇಳೆ ವರ್ಷದ ಹಿಂದೆ ಹಚ್ಚಿಟ್ಟ ದೀಪ ಇನ್ನೂ ಉರಿಯುತ್ತಿರುವುದು, ಮತ್ತು ಅಲಂಕರಿಸಿದ್ದ ಹೂವು ಬಾಡದೆ ಇರುವುದು ಹಾಗೂ ನೈವೇದ್ಯ ಕೂಡ ಹಳಸದೆ ಇರುವ ಪವಾಡ ಕಂಡು ಎಲ್ಲರೂ ಪಾವನರಾಗಿದ್ದಾರೆ.