ಅಕ್ಟೋಬರ್ 25ರಂದು ದೀಪಾವಳಿ ಅಮಾವಾಸ್ಯೆ ದಿನವಾಗಿದ್ದು, ಇದೇ ದಿನದಂದು ಭಾಗಶಃ ಸೂರ್ಯ ಗ್ರಹಣ ಸಂಭವಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ. ಅಲ್ಲದೆ ಇದು ದೇಶದ ಹಲವು ಭಾಗಗಳಲ್ಲಿ ಗೋಚರವಾಗಲಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಅಂದು ಸಂಜೆ 5.12 ಕ್ಕೆ ಗ್ರಹಣ ಆರಂಭವಾಗಲಿದ್ದು, 5.49 ಕ್ಕೆ ಗರಿಷ್ಠ ಮಟ್ಟವನ್ನು ತಲುಪಲಿದೆ. ಬಳಿಕ 5.55ರ ವೇಳೆಗೆ ಸೂರ್ಯಗ್ರಹಣ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಲಾಗಿದೆ.
ದೇಶದ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ಸೂರ್ಯ ಗ್ರಹಣ ಉತ್ತಮ ರೀತಿಯಲ್ಲಿ ಗೋಚರವಾಗಲಿದ್ದರೆ, ಈಶಾನ್ಯ ಭಾಗಗಳಲ್ಲಿ ಗ್ರಹಣ ಕಾಣಿಸದು ಎಂದು ಹೇಳಲಾಗಿದೆ.
ಗ್ರಹಣದ ಸಂದರ್ಭದಲ್ಲಿ ಸೂರ್ಯ ಕಿರಣಗಳು ಕಣ್ಣುಗಳಿಗೆ ಅಪಾಯಕಾರಿಯಾಗಿರುವುದರಿಂದ ಯಾವುದೇ ಕಾರಣಕ್ಕೂ ಬರಿಗಣ್ಣಿನಿಂದ ನೋಡಬಾರದು ಎಂದು ತಿಳಿಸಲಾಗಿದೆ. ಗ್ರಹಣ ನೋಡಲು ಇಚ್ಛಿಸುವವರು ಅತ್ಯಂತ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.