alex Certify ದೀಪಾವಳಿಯಲ್ಲಿ ಸಾಲು ʼದೀಪʼ ಬೆಳಗುವುದರ ಹಿಂದಿನ ಮಹತ್ವವೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿಯಲ್ಲಿ ಸಾಲು ʼದೀಪʼ ಬೆಳಗುವುದರ ಹಿಂದಿನ ಮಹತ್ವವೇನು…?

ದೀಪಗಳ ಹಬ್ಬ ದೀಪಾವಳಿಯಲ್ಲಿ ಮನೆ ಮನೆಯಲ್ಲಿ ದೀಪಗಳನ್ನ ಬೆಳಗಿ ಸಂಭ್ರಮಿಸಲಾಗುತ್ತದೆ. ಬಗೆ ಬಗೆಯ ಹಣತೆಗಳನ್ನ ಕೊಂಡು ತಂದು ಅಂದವಾಗಿ ಜೋಡಿಸಿಟ್ಟು ಅದರಲ್ಲಿ ಎಣ್ಣೆಹಾಕಿ ಬತ್ತಿ ಇಟ್ಟು ದೀಪ ಬೆಳಗಿ ಖುಷಿ ಪಡಲಾಗುತ್ತದೆ.

ಅದೆಷ್ಟೇ ಸರಳ ಆಚರಣೆ ಅಂದರೂ ಕೂಡ ದೀಪಗಳಿಲ್ಲದೆಯೇ ದೀಪಾವಳಿಯನ್ನ ಆಚರಿಸಲು ಸಾಧ್ಯವೇ ಇಲ್ಲ. ದೀಪಗಳಿಲ್ಲದ ದೀಪಾವಳಿ  ಹಬ್ಬವಾಗುವುದಾದರೂ ಹೇಗೆ..? ಅಲ್ಲವೆ..?

ಹಾಗಾದರೆ ದೀಪಾವಳಿ ಹಬ್ಬದಲ್ಲಿ ಏಕೆ ಸಾಲು ಸಾಲು ದೀಪಗಳನ್ನ ಬೆಳಗಿಸಲಾಗುತ್ತದೆ..? ಈ ದೀಪ ಬೆಳಗುವ ಪದ್ಧತಿ ಬಂದಿದ್ದಾದರೂ ಏಕೆ ಎಂಬ ಪ್ರಶ್ನೆ ಮೂಡುವುದು ಸಹಜವೇ. ಉತ್ತರ ಇಲ್ಲಿದೆ ನೋಡಿ.

ದೀಪಾವಳಿ ಎಂಬುದು ಈ ಹಬ್ಬದ ಪ್ರಸಿದ್ಧವಾದ ಹೆಸರು. ಅವಳಿ ಎಂಬ ಪದಕ್ಕೆ ಸಾಲು ಎಂಬ ಅರ್ಥವಿದೆ. ದೀಪಾವಳಿ ಎಂದರೆ ದೀಪಗಳ ಸಾಲು ಎಂಬ ಅರ್ಥ ಕೊಡುತ್ತದೆ.  ಅಂತಹ ದೀಪಗಳ ಪರಂಪರೆಯನ್ನ ಹೊಂದಿರುವುದರಿಂದಲೇ ಈ ಹಬ್ಬಕ್ಕೆ ಈ ನಾಮಧೇಯವಿದೆ. ಸನಾತನ ಆರ್ಯಭಾರತೀಯರ ಅತ್ಯಂತ ಜನಪ್ರಿಯವಾಗಿರುವ ಒಂದು ಮಹಾಹಬ್ಬವೇ ದೀಪಾವಳಿ. ದೇಶದ ಎಲ್ಲ ಭಾಗಗಳಲ್ಲಿಯೂ ಎಲ್ಲ ವರ್ಗಗಳ ಜನರೂ ಅತ್ಯಂತ ಸಂತೋಷ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬ ಇದು.

ದೀಪಾವಳಿ ಹಬ್ಬದ ಆಚರಣೆಯ ಕ್ರಮ ದೇಶದ ಬೇರೆಬೇರೆ ಭಾಗಗಳಲ್ಲಿ ಹಲವು ವ್ಯತ್ಯಾಸಗಳನ್ನು ಹೊಂದಿದ್ದರೂ ಕೂಡ ದೀಪೋತ್ಸವ ಮಾತ್ರ ಎಲ್ಲ ಸಂಪ್ರದಾಯಗಳಲ್ಲಿಯೂ ಇದೆ. ಹಿಂದೂಗಳು ಮಾತ್ರವಲ್ಲದೆ, ಜೈನ, ಬೌದ್ಧ, ಸಿಕ್‌ ಧರ್ಮಗಳಲ್ಲಿಯೂ ದೀಪಾವಳಿಯಂದು ದೀಪಾರಾಧನೆ ಮಾಡುತ್ತಾರೆ. ತಮಿಳುನಾಡಿನಲ್ಲಿ ಚತುರ್ದಶಿ ದಿವಸವನ್ನು ಮಾತ್ರ ದೀಪಾವಳಿಯೆಂದು ಕರೆಯುತ್ತಾರೆ. ಕರ್ನಾಟಕದಲ್ಲಿ ನರಕಚತುರ್ದಶಿ, ಅಮಾವಾಸ್ಯೆ ಮತ್ತು ಬಲಿಪಾಢ್ಯಮಿ  ಈ ಮೂರು ದಿನಗಳನ್ನೂ ದೀಪಾವಳಿಯೆನ್ನುತ್ತಾರೆ.

ಮನೆಯ ನಾನಾ ಭಾಗದಲ್ಲಿ ಮಾತ್ರವಲ್ಲದೆ ದೇವಾಲಯ, ಆಶ್ರಮ, ಮಠ, ನದೀತೀರ, ಸಮುದ್ರತೀರ ಹೀಗೆ ಎಲ್ಲೆಲ್ಲೂ  ವಿಶಿಷ್ಟವಾದ ಆಕಾಶ ದೀಪವನ್ನ ಬೆಳಗಿಸಲಾಗುತ್ತದೆ. ಎಣ್ಣೆ, ತುಪ್ಪದ ದೀಪಗಳ ಪ್ರಕಾಶ ಮಾತ್ರವಲ್ಲದೆ, ಪಟಾಕಿಗಳ ಪ್ರಕಾಶವೂ ಕಣ್ಣು ಕೋರೈಸುತ್ತದೆ.  ಹೀಗೆ ಎಲ್ಲ ರೀತಿಗಳಲ್ಲಿಯೂ ದೀಪಮಯವಾಗಿರುವ ಪರ್ವವಾಗಿರುವುದರಿಂದ  ದೀಪಾವಳಿ ಎಂಬ ಹೆಸರು ಇದಕ್ಕೆ ಅತ್ಯಂತ ಅನ್ವರ್ಥವಾಗಿದೆ. ದೀಪಾಲಿಕಾ ದೀಪೋತ್ಸವ ಎಂಬ ಹೆಸರುಗಳಿಂದ ಇದು ಕರೆಯಲ್ಪಡುವುದಕ್ಕೂ ಇದೇ ಕಾರಣ.

ದೀಪಾವಳಿ ಪರ್ವವು ಒಂದೇ ದಿನಕ್ಕೆ ಸೀಮಿತವಾಗಿರದೆ ನಾಲ್ಕೈದು ದಿನಗಳ ಕಾಲ ವಿಸ್ತಾರಗೊಂಡು ಅಷ್ಟು ದಿನಗಳಲ್ಲಿಯೂ ದೀಪಗಳನ್ನ ಬೆಳಗಿಸಲಾಗುತ್ತದೆ. ಉತ್ಸವದಲ್ಲಿ ಮಹಾವಿಷ್ಣುವಿನ ಪೂಜೆ, ಮಹಾಲಕ್ಷ್ಮಿಯ ಪೂಜೆ, ನರಕಾಸುರನ ವಧೆಯ ಸಂಭ್ರಮ, ಬಲೀಂದ್ರ ಪೂಜೆ, ಕುಬೇರಪೂಜೆ, ಯಮಧರ್ಮರಾಜನ ಪೂಜೆ, ಗೋಪೂಜೆ, ಗೋವರ್ಧನ ಪೂಜೆ ಮುಂತಾದ ಎಲ್ಲ ಪೂಜಾಪ್ರಕರಣಗಳಲ್ಲೂ ದೀಪಗಳು ಬೆಳಗಿಸಲ್ಪಡುತ್ತದೆ. ದೇವರಿಗೆ ಮಾತ್ರವಲ್ಲದೆ ಮನುಷ್ಯ ಬಂಧುಗಳಿಗೂ ಮತ್ತು ಪ್ರಾಣಿಗಳಿಗೂ ದೀಪಾರತಿ ನಡೆಯುತ್ತದೆ. ಹೀಗೆ ದೀಪ ಪ್ರಧಾನವಾದ ಈ ಆಚರಣೆಗೆ ದೀಪಾವಳಿ ಎಂಬ ಹೆಸರು ಬಂತು.

ದೀಪಾವಳಿಯ ರಾತ್ರಿಯ ಕತ್ತಲೆಯಲ್ಲಿ ಹತ್ತಿರುವ ದೀಪಗಳ ಸಾಲನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ. ಇಲ್ಲಿ ಕತ್ತಲೆಯು ಕರಗಿ ಬೆಳಕಿನ ಆನಂದದ ಅನುಭವವಾಗುತ್ತದೆ. ದೀಪಗಳನ್ನು ನಮ್ಮ ನಮ್ಮ ಮನೆಗಳ ಒಳಗೆ ಹಚ್ಚಿಡುವುದು ಮಾತ್ರವಲ್ಲದೆ ಮನೆಯ ಹೊರಗಡೆಯಲ್ಲಿಯೂ ರಸ್ತೆಯ ಪಕ್ಕಗಳಲ್ಲಿಯೂ ಆಕಾಶದೀಪವಾಗಿಯೂ ಸ್ತಂಭಗಳ ಎತ್ತರವಾದ ಜಾಗದಲ್ಲಿ ಹಚ್ಚಿಡಲಾಗುತ್ತದೆ. ಎಲ್ಲ ದೀಪಗಳಿಗಿಂತ ಹಸುವಿನ ತುಪ್ಪದ ದೀಪ ಆರೋಗ್ಯಕಾರಿಯಾಗಿರುವುದರಿಂದ ಶ್ರೇಷ್ಠ ಎಂಬ ಮಾತಿದೆ. ಹಾಗೇ ಎಳ್ಳೆಣ್ಣೆಯ ದೀಪದಿಂದ ಪೀಡಾ ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ.

ದೀಪ ಜ್ಞಾನದ ಸಂಕೇತ. ಕತ್ತಲೆ ಅಜ್ಞಾನದ ಸಂಕೇತ. ಸಾಲು ಸಾಲು ದೀಪಗಳನ್ನ ಬೆಳಗಿಸುವ ಈ ಸಂಪ್ರದಾಯದ ಹಿಂದೆ ನಮ್ಮ ಸುತ್ತಮುತ್ತ ಕವಿದುಕೊಂಡಿರುವ ಅಜ್ಞಾನವನ್ನ ಹೊಡೆದೋಡಿಸಿ ಜ್ಞಾನವನ್ನ ಪಸರಿಸುವ ಸಲುವಾಗಿ ಎಲ್ಲೆಲ್ಲೂ ಜ್ಞಾನದ ದೀಪಗಳನ್ನ ಬೆಳಗಲಾಗುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...