ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತೆ. ಅದಾದ ನಂತರದಲ್ಲಿ ಕೆಲವು ಕಡೆಗಳಲ್ಲಿ ಹಿರಿಯರ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ನಿಧನರಾದ ಹಿರಿಯರನ್ನು ಸ್ಮರಿಸಿ ಅವರ ಹೆಸರಿನಲ್ಲಿ ಪೂಜೆ ಮಾಡಲಾಗುತ್ತದೆ.
ಆ ವರ್ಷ ನಿಧನರಾದವರನ್ನು ಒಂದುಗೂಡಿಸಿಕೊಳ್ಳಿ ಎಂದು ಹಿರಿಯರಲ್ಲಿ ಬೇಡಲಾಗುತ್ತದೆ. ಹಿರಿಯರ ಪೂಜೆಯಲ್ಲಿ ಲುಂಗಿ, ಸೀರೆ, ಟವೆಲ್ ಮೊದಲಾದ ಹೊಸ ಬಟ್ಟೆ, ಹಿರಿಯರಿಗೆ ಇಷ್ಟವಾದ ತಿಂಡಿ, ತಿನಿಸು, ಮನೆಯಲ್ಲಿ ಮಾಡಿದ ಅಡುಗೆ ಮೊದಲಾದವುಗಳನ್ನು ಇಟ್ಟು ಹಿರಿಯರ ಹೆಸರಿನಲ್ಲಿ ಪೂಜಿಸಲಾಗುತ್ತದೆ.
ವರ್ಷದ ತೊಡಕು ಎಂಬುದು ದೀಪಾವಳಿಯಲ್ಲಿ ಕೇಳಿಬರುವ ಮತ್ತೊಂದು ಮಾತಾಗಿದೆ. ವರ್ಷದ ತೊಡಕಿನ ಊಟ ಮಾಡಿದರೆ, ಅನ್ನಕ್ಕೆ ತೊಂದರೆಯಾಗುವುದಿಲ್ಲ ಎಂಬ ನಂಬಿಕೆ ಇದೆ.
ಇನ್ನು ವ್ಯವಹಾರಸ್ಥರು ಲಕ್ಷ್ಮಿ ಪೂಜೆ ಮಾಡಿದಂತೆಯೇ ಗ್ರಾಮೀಣ ಪ್ರದೇಶದಲ್ಲಿ ರೈತರು ತಮ್ಮ ಕೃಷಿ ಸಲಕರಣೆ, ಪರಿಕರಗಳನ್ನು ಪೂಜಿಸುತ್ತಾರೆ. ಗಳೇವು, ಕುಂಟೆ, ಕೂರಿಗೆ, ಕುಳ, ಕುಡಗೋಲು, ನೇಗಿಲು, ಗಾಡಿ ಮೊದಲಾದ ಪರಿಕರ ಹಾಗೂ ಎತ್ತುಗಳನ್ನು ತೊಳೆದು ಸಿಂಗರಿಸುತ್ತಾರೆ.
ಗ್ರಾಮೀಣ ಪ್ರದೇಶದಲ್ಲಿನ ದೀಪಾವಳಿ ಸಂಭ್ರಮವೇ ಬೇರೆ ರೀತಿಯದು. ಎಲ್ಲರೂ ಒಂದಾಗಿ ಕೃಷಿ ಸಲಕರಣೆಗಳನ್ನು ಪೂಜೆಗೆ ಸಿದ್ಧಪಡಿಸಿದರೆ, ಒಳಗೆ ಹೆಣ್ಣು ಮಕ್ಕಳು ಅಡುಗೆ ತಯಾರಿಯಲ್ಲಿ ನಿರತರಾಗಿರುತ್ತಾರೆ. ಮಕ್ಕಳಿಗೆ ಪಟಾಕಿ ಬಗ್ಗೆಯೇ ಚಿಂತೆ. ಹೀಗೆ ಹಲವು ಚಿತ್ರಣಗಳನ್ನು ಗ್ರಾಮೀಣ ಪ್ರದೇಶದಲ್ಲಿ ಕಾಣಬಹುದಾಗಿದೆ.