ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳನ್ನು ನಾವೆಲ್ಲ ಆಚರಿಸಿದ್ದೇವೆ. ಹಬ್ಬದ ಸಮಯದಲ್ಲಿ ವಿವಿಧ ರೀತಿಯ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳನ್ನು ಸವಿದಿದ್ದಾಗಿದೆ. ಈ ಮೂಲಕ ಸಕ್ಕರೆ, ಮೈದಾ ಮತ್ತು ಉಪ್ಪು ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ದೇಹ ಸೇರಿದೆ. ಇವುಗಳ ಅತಿಯಾದ ಸೇವನೆಯಿಂದ, ಹೊಟ್ಟೆ ಮತ್ತು ಕರುಳಿನಲ್ಲಿ ವಿವಿಧ ರೀತಿಯ ವಿಷಗಳು ಸಂಗ್ರಹವಾಗುತ್ತವೆ. ಇದು ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ.
ಒಮ್ಮೆ ನಿಮ್ಮ ಹೊಟ್ಟೆಯ ಆರೋಗ್ಯ ಹದಗೆಟ್ಟರೆ ಅದನ್ನು ಸರಿಪಡಿಸಿಕೊಳ್ಳುವುದು ಕಷ್ಟ. ಹಾಗಾಗಿ ದೀಪಾವಳಿಯಲ್ಲಿ ಅತಿಯಾದ ಎಣ್ಣೆಯುಕ್ತ ಮತ್ತು ಸಕ್ಕರೆ ಮಿಶ್ರಿತ ತಿನಿಸುಗಳ ಸೇವನೆಯಿಂದ ವಿಷಮಯವಾಗಿರೋ ನಮ್ಮ ದೇಹವನ್ನು ಡಿಟಾಕ್ಸ್ ಮಾಡಬೇಕು. ಸಾಕಷ್ಟು ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿರುತ್ತದೆ. ಹೊಟ್ಟೆಯನ್ನು ಆರೋಗ್ಯಕರವಾಗಿಡಲು ಇದು ಸುಲಭವಾದ ಮಾರ್ಗವಾಗಿದೆ.
ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು. ಇದಲ್ಲದೆ ನೀವು ಟೊಮ್ಯಾಟೊ, ಸೆಲರಿ, ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ಆಹಾರದಲ್ಲಿ ಸೇರಿಸುವ ಮೂಲಕ ದೇಹವನ್ನು ನಿರ್ವಿಷಗೊಳಿಸಬಹುದು. ಹೊಟ್ಟೆ ಮತ್ತು ಕರುಳನ್ನು ಸ್ವಚ್ಛಗೊಳಿಸಲು ನೀವು ಉಪ್ಪು ನೀರನ್ನು ಕುಡಿಯಬಹುದು. ಇದಕ್ಕಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ, ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಉಪ್ಪನ್ನು ಬೆರೆಸಿ ಕುಡಿಯಿರಿ. ಹೀಗೆ ಮಾಡುವುದರಿಂದ ಹೊಟ್ಟೆಯ ಭಾರದಿಂದ ಮುಕ್ತಿ ಸಿಗುತ್ತದೆ.
ಆಪಲ್ ಸೈಡರ್ ವಿನೆಗರ್ ಅನ್ನು ಪ್ರೋಬಯಾಟಿಕ್ ಎಂದು ಪರಿಗಣಿಸಲಾಗುತ್ತದೆ. ಇದು ಕರುಳನ್ನು ಶುಚಿಗೊಳಿಸಲು ಅತ್ಯುತ್ತಮವಾಗಿರುತ್ತದೆ. ಏಕೆಂದರೆ ಆಪಲ್ ಸೈಡರ್ ವಿನೆಗರ್ ಕೆಟ್ಟ ಬ್ಯಾಕ್ಟೀರಿಯಾವನ್ನು ಕೊಲ್ಲುವ ಕಿಣ್ವಗಳು ಮತ್ತು ಆಮ್ಲಗಳನ್ನು ಹೊಂದಿರುತ್ತದೆ. ಆದ್ದರಿಂದ ನೀವು ಇದನ್ನು ಸಹ ಸೇವಿಸಬಹುದು.ಈ ರೀತಿಯಾಗಿ ಮನೆಯಲ್ಲಿಯೇ ದೇಹವನ್ನು ಡಿಟಾಕ್ಸ್ ಮಾಡಬಹುದು.