alex Certify ದೀಪಾವಳಿಯಲ್ಲಿ ʼಆಕಾಶ ದೀಪʼ ಹಚ್ಚುವ ಸಂಪ್ರದಾಯ ಏಕಿದೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿಯಲ್ಲಿ ʼಆಕಾಶ ದೀಪʼ ಹಚ್ಚುವ ಸಂಪ್ರದಾಯ ಏಕಿದೆ….?

ದೀಪಾವಳಿ ಬರುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ವಿಧ ವಿಧವಾದ ಆಕಾಶಬುಟ್ಟಿಗಳು ಗ್ರಾಹಕರನ್ನ ಆಕರ್ಷಿಸೋದಕ್ಕೆ ಸಿದ್ಧವಾಗಿರುತ್ತವೆ. ನಾನಾ ವಿಧದ, ನಾನಾ ಬಣ್ಣದ, ಎಲೆಕ್ಟ್ರಿಕ್‌ ಆಕಾಶ ಬುಟ್ಟಿಗಳು, ಮ್ಯೂಸಿಕಲ್‌ ಆಕಾಶಬುಟ್ಟಿಗಳು ಕೂಡ ಕಣ್ಮನ ಸೆಳೆಯುತ್ತಿರುತ್ತವೆ.

ಮನೆಯ ಮಕ್ಕಳಿಗೆ ಚೆಂದದ ಆಕಾಶಬುಟ್ಟಿಗಳನ್ನ ತಂದು ತಮ್ಮ ಮನೆಯ ಮುಂದಿನ ಛಾವಣಿಗೆ ಹಾಕಿ, ರಾತ್ರಿಯ ಹೊತ್ತು ಆಕಾಶಬುಟ್ಟಿಯ ಬೆಳಕಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಬೇಕು ಎಂಬ ಆಸೆ ಇರುತ್ತದೆ.

ಇದಕ್ಕಾಗಿ ತಮ್ಮ ತಂದೆ- ತಾಯಿಯನ್ನ ಕಾಡಿಬೇಡಿಯಾದರೂ ಆಕಾಶಬುಟ್ಟಿಯನ್ನ ಅವರು ಕೊಂಡುಕೊಂಡಿರುತ್ತಾರೆ. ದೀಪಾವಳಿಯಲ್ಲಿ ಮನೆಮನೆಯಲ್ಲಿ ಕಾಣಸಿಗುವ ಈ ಆಕಾಶಬುಟ್ಟಿಗಳು ಕೇವಲ ದೀಪಾವಳಿಯ ಅಂದ ಹೆಚ್ಚಿಸುವುದಕ್ಕೆ ಮಾತ್ರವಲ್ಲ. ಮನೆಗಳಲ್ಲಿ ಆಕಾಶದೀಪವನ್ನ ಹಚ್ಚಿಡುವುದಕ್ಕೂ ಒಂದು ಶಾಸ್ತ್ರವಿದೆ.

ಆಕಾಶದೀಪ ಕೂಡ ಪರಮಾತ್ಮ ದೀಪದ ವೈಭವವನ್ನು ಘೋಷಣೆ ಮಾಡುವುದೇ ಆಗಿದೆ. ಪರಮಾತ್ಮನು ಜ್ಞಾನ ಎಂಬ ಆಕಾಶದಲ್ಲಿ ಸದಾ ಬೆಳಗುತ್ತಿರುವುದರಿಂದ ಅವನ ಪ್ರತೀಕವಾಗಿ ಆಕಾಶ ದೀಪವನ್ನು ಸ್ತಂಭಗಳ ಮೇಲೆ ಹೊತ್ತಿಸಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ಈ ಆಕಾಶ ದೀಪ ಇರಬೇಕಾದ ರೂಪಕ್ಕೂ ಕೂಡ ನಿಯಮಾವಳಿಗಳಿವೆ.

ದೀಪವನ್ನು ಹೊತ್ತಿಸಿ ಇಡುವ ಆಕಾಶಗೂಡು ಎಂಟು ದಳಗಳಿಂದ ಕೂಡಿರಬೇಕು. ಎಂಟು ದ್ವಾರಗಳ ಮೂಲಕ ದೀಪಗಳ ಪ್ರಕಾಶ ಬರಬೇಕು. ಮಧ್ಯದಲ್ಲಿ ಕರ್ಣಿಕಾ ಸ್ಥಾನದಲ್ಲಿ ಕೇಂದ್ರ ದೀಪವು ಇಡಲ್ಪಡಬೇಕು ಎಂಬಿತ್ಯಾದಿ ನಿಯಮಗಳಿವೆ.

ಅಲ್ಲದೆ ಆಕಾಶ ದೀಪದ ಕಂಬವನ್ನು ಮನೆಗೆ ಹತ್ತಿರದಲ್ಲಿಯೇ ನೆಡಬೇಕು. ಆ ಕಂಬವು ಯಜ್ಞಸ್ತಂಭದ ಆಕಾರದಿಂದ ಕೂಡಿರಬೇಕು. ಮುತ್ತುಗ, ಅರಳಿ, ಕಗ್ಗಲಿ, ಬನ್ನಿ ಮುಂತಾದ ಯಜ್ಞಕ್ಕೆ ಬಳಸುವ ಮರದ ಕಂಬವೇ ಆಗಿದ್ದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ಆ ಕಂಭದ ತಲೆಯ ಮೇಲೆ ಎಂಟು ದಳಗಳ ಆಕಾರ ಬರುವ ದೀಪಬುಟ್ಟಿಯನ್ನ ನಿರ್ಮಿಸಿ, ಆ ಬುಟ್ಟಿಯ ರಂಧ್ರಗಳಿಂದ ಎಂಟು ದಿಕ್ಕುಗಳಲ್ಲಿಯೂ ಹೊಮ್ಮುವ ಪ್ರಕಾಶಗಳು, ಧರ್ಮನಿಗೆ, ಹರನಿಗೆ, ಭೂದೇವಿಗೆ, ದಾಮೋದರನಿಗೆ, ಧರ್ಮರಾಜನಿಗೆ, ಪ್ರಜಾಪತಿಗಳಿಗೆ ಶ್ರೇಷ್ಠರಾದ ಪಿತೃದೇವತೆಗಳಿಗೆ ಮತ್ತು ಕತ್ತಲೆಯಲ್ಲಿ ಮಿಡುಕಾಡುತ್ತಿರುವ ಪ್ರೇತಗಳಿಗೆ ಎಂದು ವಿಭಾಗಿಸಲಾಗಿದೆ.

ಯಾವುದೋ ಒಳ್ಳೆಯ ಉದ್ದೇಶಗಳ ನೆಲೆಗಟ್ಟಿನ ಮೇಲೆ ಈ ಶಾಸ್ತ್ರಗಳು ಹುಟ್ಟಿರಬಹುದು. ಆದರೆ ವರ್ಷಗಳು ಉರುಳುತ್ತಾ ಹೋದಂತೆ, ತಲೆಮಾರುಗಳಿಂದ ತಲೆಮಾರುಗಳಿಗೆ ಸಂಪ್ರದಾಯ ದಾಟುತ್ತಾ ಸಾಗಿದಂತೆ ಅದರ ಮೂಲರೂಪವನ್ನ ಕಳೆದುಕೊಳ್ಳುತ್ತದೆ.

ಮೂಲ ಉದ್ದೇಶಗಳು ಮರೆಯಾಗಿ ಕೇವಲ ಆಚರಣೆಯೊಂದೇ ವಿಜೃಂಭಿಸುವುದಕ್ಕೆ ಆರಂಭಿಸಿಬಿಡುತ್ತವೆ.  ಆಕಾಶ ಬುಟ್ಟಿಯ ಸಂಸ್ಕೃತಿಯ ಮೇಲೆಯೂ ಕೂಡ ಈಗ ಆಧುನಿಕತೆಯ ಗಾಳಿ ತಾಕಿ, ಅವುಗಳೂ ಈಗ ಹೊಸ ರೂಪವನ್ನ ಪಡೆದುಕೊಂಡಿವೆ.

ಆಕಾಶಬುಟ್ಟಿಗಳಿಗೂ ಆಧುನಿಕ ಸ್ಪರ್ಷ ಸಿಕ್ಕಿದ್ದು ಒಳ್ಳೆಯ ವಿಷಯವೇ ಆದರೂ ಅದರ ಹಿಂದಿನ ಉದ್ದೇಶ, ಇತಿಹಾಸವನ್ನು ತಿಳಿದುಕೊಳ್ಳುವುದೂ ಕೂಡ ಅಷ್ಟೇ ಮುಖ್ಯ. ಶಾಸ್ತ್ರವಿಧಾನಗಳನ್ನೆಲ್ಲವನ್ನೂ ಅನುಸರಿಸದಿದ್ದರೂ ಆಕಾಶಬುಟ್ಟಿಯನ್ನ ಮನೆಯ ಮುಂಭಾಗದಲ್ಲಿ ಶೃಂಗರಿಸುವುದಕ್ಕಂತೂ ಇಂದಿನ ಪೀಳಿಗೆ ಮರೆಯೋದಿಲ್ಲ.

ಹಳೆಯ ಸಂಪ್ರದಾಯ ಉಳಿದುಕೊಂಡು ಬರುತ್ತಿರುವ ವಿಷಯ ಸ್ವಾಗತಾರ್ಹವೇ ಆದರೂ, ಆಕಾಶಬುಟ್ಟಿಗಳ ಸೌಂದರ್ಯವನ್ನ ಸವಿಯುವುದರ ಜೊತೆಗೆ ಅವುಗಳ ಹಿಂದಿರುವ ಶಾಸ್ತ್ರಗಳು ಮತ್ತು ಆ ಶಾಸ್ತ್ರಗಳ ಹಿಂದಿನ ಉದ್ದೇಶವನ್ನೂ ಕೂಡ ತಲೆಮಾರಿನಿಂದ ತಲೆಮಾರಿಗೆ ದಾಟುವಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...