ಶಿರಸಿ: ದೀಪಾವಳಿ ದಿನದಂದು ಪೂಜೆಗಾಗಿ ಲಕ್ಷ್ಮೀ ದೇವಿಗೆಂದು ಹಾಕಿದ್ದ 20 ಗ್ರಾಂ ಚಿನ್ನದ ಸರ ಕಾಣೆಯಾಗಿತ್ತು. ಚಿನ್ನ ಕಳೆದಿದೆ ಎಂದರೆ ಕೇಳಬೇ ಕೆ? ಮನೆ ಮಂದಿಯೆಲ್ಲ ಹುಡುಕಾಡಿದ್ದೇ ಹುಡುಕಾಡಿದ್ದು. ಕೊನೆಗೆ ಮನೆಯಲ್ಲಿನ ಹಸು ಹಾಗೂ ಕರುಗಳೇ ಇದನ್ನು ನುಂಗಿರಬಹುದು ಎಂದು ಮನೆಯವರೆಲ್ಲ ನಿರ್ಧರಿಸಿದ್ದರು.
ಆದರೆ, ಹಸು ನುಂಗಿದೆಯೇ ? ಅಥವಾ ಕರು ನುಂಗಿದೆಯೇ ? ಎಂಬ ಗೊಂದಲ ಮನೆಯವರಿಗಿತ್ತು. ಆ ನಂತರ ತಿಂಗಳುಗಳ ಕಾಲ ಹಸು ಹಾಗೂ ಕರುವಿನ ಸಗಣಿಯಲ್ಲಿ ಸರ ಬರುವ ಹಾದಿ ಕಾಯ್ದಿದ್ದಾರೆ. ಸಗಣಿಯಲ್ಲಿ ಚಿನ್ನದ ಸರ ಬಾರದಿದ್ದಾಗ ಪಶು ವೈದ್ಯರನ್ನು ಸಂಪರ್ಕಿಸಿದ್ದಾರೆ.
ಪಶು ವೈದ್ಯರು ತಪಾಸಣೆ ನಡೆಸಿದ ನಂತರ ಹಸು ಸರ ನುಂಗಿದೆ ಎಂಬುವುದು ಖಚಿತವಾಗಿದೆ. ಆ ನಂತರ ಶಸ್ತ್ರಚಿಕಿತ್ಸೆಯ ಮೂಲಕ ಸರ ಹೊರ ತೆಗೆದಿದ್ದಾರೆ. ಸಮೀಪದ ಉಮ್ಮಚಗಿ ಪಶುವೈದ್ಯ ಡಾ. ರಾಜೇಶ, ರಘುಪತಿ ಭಟ್ ಅವರ ತಂಡ ಶಸ್ತ್ರಚಿಕಿತ್ಸೆಯ ಮೂಲಕ ಚಿನ್ನದ ಸರ ಹೊರ ತೆಗೆದಿದ್ದಾರೆ.