ದೀಪಾವಳಿ ಹಬ್ಬ ಬಂತಂದ್ರೆ ಆನ್‌ಲೈನ್ ಶಾಪಿಂಗ್ ಭರಾಟೆ ಜೋರಾಗಿರುತ್ತದೆ. ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಭರ್ಜರಿ ಡಿಸ್ಕೌಂಟ್‌ಗಳು ಮತ್ತು ಮಾರಾಟ ಪ್ರಾರಂಭವಾಗುತ್ತವೆ. ಈ ಸೇಲ್‌ಗಾಗಿಯೇ ಜನರು ಪ್ರತಿ ವರ್ಷ ಕಾಯುತ್ತಾರೆ.
ಕಡಿಮೆ ಬೆಲೆಯಲ್ಲಿ ಮೊಬೈಲ್ ಅಥವಾ ಫ್ರಿಜ್‌ನಂತಹ ವಸ್ತುಗಳನ್ನು ಈ ಸಂದರ್ಭದಲ್ಲಿ ಖರೀದಿಸಬಹುದು. ಆದರೆ ಹಲವಾರು ಬಾರಿ ಭಾರೀ ರಿಯಾಯಿತಿಯ ನಂತರವೂ ಗ್ರಾಹಕರು ವಂಚನೆಗೊಳಗಾಗುತ್ತಾರೆ. ಈ ವಂಚನೆಯಿಂದ ಪಾರಾಗಲು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ನಂಬಿಕೆಗೆ ಅರ್ಹವಾದ ವೆಬ್‌ಸೈಟ್‌ಗಳನ್ನೇ ಆಯ್ದುಕೊಳ್ಳಿ. ಯಾವುದೇ ವೆಬ್‌ಸೈಟ್‌ನಿಂದ ಏನನ್ನಾದರೂ ಖರೀದಿಸುವ ಮೊದಲು ಅದು ಯಾವ ರೀತಿಯ ವೆಬ್‌ಸೈಟ್ ಎಂದು ಪರಿಶೀಲಿಸಿ.
ವಿಭಿನ್ನ ವೆಬ್‌ಸೈಟ್‌ಗಳಲ್ಲಿ ಒಂದೇ ವಸ್ತುವಿನ ಬೆಲೆ ವಿಭಿನ್ನವಾಗಿರಬಹುದು. ಆದ್ದರಿಂದ ಖರೀದಿಸುವ ಮೊದಲು ಬೆಲೆಗಳನ್ನು ಹೋಲಿಸಬೇಕು. ಏಕೆಂದರೆ ನೀವು ಖರೀದಿಸುವ ವಸ್ತುವು ಇನ್ನೊಂದು ಪೋರ್ಟಲ್‌ನಲ್ಲಿ ಕಡಿಮೆ ಬೆಲೆಗೆ ಸಿಗುವ ಸಾಧ್ಯತೆ ಇರುತ್ತದೆ.
ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಯಾವುದೇ ಡೀಲ್ ಅಗತ್ಯಕ್ಕಿಂತ ಹೆಚ್ಚು ಆಕರ್ಷಕವಾಗಿ ಕಂಡುಬಂದರೆ ಜಾಗರೂಕರಾಗಿರಬೇಕು. ಏಕೆಂದರೆ ಯಾವುದೂ ಉಚಿತವಾಗಿ ಸಿಗುವುದಿಲ್ಲ. ಆದ್ದರಿಂದ ಆನ್‌ಲೈನ್‌ನಲ್ಲಿ ಅತ್ಯಂತ ಕಡಿಮೆ ಬೆಲೆಯಿದ್ದರೆ ಆ ವಸ್ತು ನಕಲಿಯೇ ಎಂಬುದನ್ನು ಪರಿಶೀಲಿಸಿ.
ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸುವುದು ಆನ್‌ಲೈನ್ ಶಾಪಿಂಗ್‌ನ ಸುಲಭವಾದ ಮಾರ್ಗ. ಆದರೆ ಹಣ ಪಾವತಿಗೂ ಮುನ್ನ ಅದು ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ.
ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಆ ವಸ್ತುವನ್ನು ನಿಮಗಿಂತ ಮೊದಲು ಯಾರಾದರೂ ಖರೀದಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಿ. ಗ್ರಾಹಕರ ರಿವ್ಯೂ ಕೂಡ ಪರಿಶೀಲಿಸಿ.