ಮತಾಂತರದ ಕಥಾ ಹಂದರ ಹೊಂದಿದೆ ಎನ್ನಲಾಗುತ್ತಿರುವ ‘ದಿ ಕೇರಳ ಸ್ಟೋರಿ’ ವಿವಾದದ ನಡುವೆಯೂ ಭರ್ಜರಿ ಯಶಸ್ಸು ಕಾಣುತ್ತಿದೆ. ಚಿತ್ರ ಈಗಾಗಲೇ ನೂರು ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಗಳಿಕೆ ಮಾಡಿದ್ದು, ಇನ್ನೂ ಕೂಡ ಚಿತ್ರದ ಪ್ರದರ್ಶನ ಮುಂದುವರೆದಿದೆ.
ಕೆಲವೆಡೆ ಕಾಲೇಜು ವಿದ್ಯಾರ್ಥಿನಿಯರಿಗಾಗಿ ‘ದಿ ಕೇರಳ ಸ್ಟೋರಿ’ ಚಿತ್ರದ ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ಹೀಗೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನ ಶಿಕ್ಷಣ ಸಂಸ್ಥೆಯೊಂದು ಚಿತ್ರ ವೀಕ್ಷಣೆಗೆ ತರಗತಿಯನ್ನೇ ರದ್ದುಗೊಳಿಸಲು ಮುಂದಾದ ಘಟನೆ ನಡೆದಿದೆ.
ಇಳಕಲ್ ನಲ್ಲಿರುವ ವಿಜಯ ಮಹಾಂತೇಶ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಸಿ. ದಾಸ್, ಮೇ 24ರಂದು ‘ದಿ ಕೇರಳ ಸ್ಟೋರಿ’ ವೀಕ್ಷಣೆಗಾಗಿ ತರಗತಿಗಳಿಗೆ ರಜೆ ಘೋಷಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಆದೇಶ ರದ್ದು ಮಾಡಿದ್ದಾರೆ. ಇದರ ಮಧ್ಯೆ ವಿದ್ಯಾರ್ಥಿಗಳು ಶ್ರೀನಿವಾಸ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿ ಬಳಿಕ ತರಗತಿಗೆ ಹಾಜರಾಗಿದ್ದಾರೆ.