ಬೆಂಗಳೂರು: ದಿನಸಿ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸುವ ನೆಪದಲ್ಲಿ ಡ್ರಗ್ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಕೆ.ಜಿ. ಹಳ್ಳಿ ಪೊಲೀಸರು ಈ ಜಾಲ ಬೇಧಿಸಿದ್ದು, ಮಣಿಪುರದ ಖಾನ್ ಹಾಗೂ ಸಮೀರ್ ಬಂಧಿತ ಆರೋಪಿಗಳು. ಇವರು ಅಲ್ಲಿಂದ ವಾರಕ್ಕೊಮ್ಮೆ ರೈಲಿನಲ್ಲಿ ನಗರಕ್ಕೆ ಬಂದು, ದಿನಸಿ ಹಾಗೂ ಅಗತ್ಯ ವಸ್ತುಗಳ ಮಾರಾಟ ಮಾಡುವ ನೆಪದಲ್ಲಿ ಡಬ್ಬಿ, ಬಾಕ್ಸ್, ಕುಕ್ಕರ್ ಗಳಲ್ಲಿ ಡ್ರಗ್ಸ್ ಇಟ್ಟು ಸಾಗಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಾರಕ್ಕೊಮ್ಮೆ ಬಂದಾಗಲೂ ತಮ್ಮ ಸ್ಥಳವನ್ನು ಇವರು ಬದಲಾಯಿಸುತ್ತ ತೆರಳುತ್ತಿದ್ದರು. ತಮ್ಮ ಹಳೆಯ ಗ್ರಾಹಕರು ಹಾಗೂ ಸಬ್ ಪೆಡ್ಲರ್ ಗಳ ಸಹಾಯದಿಂದ ದಿನಸಿ ಮಾರಾಟದ ನೆಪದಲ್ಲಿ ಡ್ರಗ್ ಪೂರೈಕೆ ಮಾಡುತ್ತಿದ್ದರು. ಒಂದು ಗ್ರಾಂ ಹೆರಾಯಿನ್ ನ್ನು 12 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.