ಸದಾ ಒತ್ತಡದಲ್ಲಿಯೇ ಕಾರ್ಯ ನಿರ್ವಹಿಸುವ ಅನಿವಾರ್ಯತೆ, ಮೊದಲಾದ ಕಾರಣಗಳಿಂದ ಸಣ್ಣ ಕೆಲಸವನ್ನು ಮಾಡಲು ಕೂಡ ಆಯಾಸವೆನಿಸುತ್ತದೆ. ಆಯಾಸವನ್ನು ದೂರ ಮಾಡಿ ದಿನವಿಡೀ ಖುಷಿಯಾಗಿರಲು ಇದನ್ನು ಅನುಸರಿಸಿ.
ಕೆಲವರು ಯಾವಾಗಲೂ ಸಂತಸ, ಲವಲವಿಕೆಯಿಂದ ಇರುತ್ತಾರೆ. ಮತ್ತೆ ಕೆಲವರಲ್ಲಿ ಖುಷಿ ಎಂಬುದು ಕಾಣುವುದೇ ಇಲ್ಲ. ಖುಷಿ ಅದಾಗಿಯೇ ಬರುವುದಿಲ್ಲ. ನಿಮ್ಮ ಹವ್ಯಾಸ, ನಡವಳಿಕೆ ಕೂಡ ಖುಷಿಗೆ ಕಾರಣವಾಗುತ್ತವೆ.
ಸಾಮಾನ್ಯವಾಗಿ ಬೆಳಿಗ್ಗೆ ಎದ್ದ ಕೂಡಲೇ ದೈನಂದಿನ ಕೆಲಸ ಆರಂಭವಾಗುತ್ತವೆ. ನಿದ್ದೆ ಸರಿಯಾಗದಿದ್ದರೆ, ಬೆಳಿಗ್ಗೆ ಏಳಲು ಆಯಾಸವೆನಿಸುತ್ತದೆ. ನಿದ್ದೆಯಿಂದ ಏಳುವುದು ತಡವಾದಲ್ಲಿ ದಿನವಿಡಿ ಸಮಯ ಹೊಂದಿಸಿಕೊಳ್ಳಲು ಕಷ್ಟವಾಗಬಹುದು. ಹಾಗಾಗಿ ರಾತ್ರಿ ಬೇಗನೆ ಮಲಗಿ, ಬೆಳಿಗ್ಗೆ ಬೇಗನೆ ಎದ್ದು ಚಟುವಟಿಕೆಯಿಂದ ಇರಿ. ನೆಮ್ಮದಿಯಿಂದ ನಿದ್ದೆ ಮಾಡಿದರೆ, ಬೆಳಿಗ್ಗೆ ಏಳುವುದು ಕಷ್ಟವಾಗುವುದಿಲ್ಲ.
ಇನ್ನು ಧ್ಯಾನ, ವ್ಯಾಯಾಮ, ಆಹಾರ ಪದ್ಧತಿಗಳು ನಿಮ್ಮ ಚಟುವಟಿಕೆಗೂ ಕಾರಣವಾಗುತ್ತವೆ. ಬೆಳಿಗ್ಗೆ ಎಚ್ಚರವಾದ ಕೂಡಲೇ ಹಾಸಿಗೆಯಿಂದ ದೂರ ಸರಿದು ನಿಮ್ಮ ನಿತ್ಯದ ಕಾರ್ಯ ಮುಗಿಸಿಕೊಂಡು ಹೊರಗಿನ ಕೆಲಸಕ್ಕೆ ತಯಾರಾಗಿ. ಎದುರಾಗುವ ಪರಿಚಯಸ್ಥರು, ಸ್ನೇಹಿತರ ಕಡೆಗೆ ಸಣ್ಣದೊಂದು ನಗೆ ಬೀರಿ. ಇದರಿಂದ ಬಾಂಧವ್ಯ ಹೆಚ್ಚಾಗುತ್ತದೆ. ಅವರೊಂದಿಗಿನ ಆತ್ಮೀಯ ಮಾತು ನಿಮ್ಮಲ್ಲಿ ಉತ್ಸಾಹ ತರುತ್ತದೆ. ಇದರಿಂದ ಆಯಾಸ ಕಾಣುವುದಿಲ್ಲ.