ಇಂಟರ್ನೆಟ್ ಮತ್ತು ಮೊಬೈಲ್ ಫೋನ್‌ಗಳು ಈಗ ನಮ್ಮ ಜೀವನದ ಬಹುಮುಖ್ಯ ಭಾಗವಾಗಿಬಿಟ್ಟಿವೆ. ಅವುಗಳ ಸಹಾಯದಿಂದ ದೈನಂದಿನ ಬದುಕು ಸುಲಭವಾಗಿರೋದು ಸತ್ಯ. ಆದ್ರೆ ಈ ವಿಶಿಷ್ಟ ತಂತ್ರಜ್ಞಾನ ಕೆಲವು ಅನಾನುಕೂಲತೆಗಳನ್ನೂ ಹೊಂದಿದೆ.
ನಾವು ಕೆಲಸ ಅಥವಾ ಮನರಂಜನೆಗಾಗಿ ನಮ್ಮ ಸೆಲ್ ಫೋನ್‌ಗಳಿಗೆ ಅಂಟಿಕೊಂಡಿದ್ದೇವೆ. ಇದರಿಂದ ಸಣ್ಣ ಮಕ್ಕಳು ಕೂಡ ಮೊಬೈಲ್ ಗೆ ಅಡಿಕ್ಟ್ ಆಗ್ತಿದ್ದಾರೆ. ಅರ್ಜೆಂಟ್ ಕೆಲಸವಿದೆ ಎಂದಾಗ ಮಗುವಿನ ಕೈಗೆ ಹೆತ್ತವರೇ ಮೊಬೈಲ್ ಕೊಟ್ಟುಬಿಡ್ತಾರೆ. ಕೆಲವೊಮ್ಮೆ ಅಳ್ತಾ ಇರೋ ಮಗುವನ್ನು ಸುಮ್ಮನಾಗಿಸಲು ಮೊಬೈಲ್ ಕೊಡ್ತಾರೆ.
ಕ್ರಮೇಣ ಮಗುವೂ ಸ್ಮಾರ್ಟ್‌ಫೋನ್‌ಗೆ ದಾಸನಾಗಿಬಿಡುತ್ತೆ. ದಿನವಿಡೀ ಮೊಬೈಲ್ ಬೇಕೆಂದು ರಂಪ ಶುರುಮಾಡುತ್ತೆ. ಎಷ್ಟೋ ಮಕ್ಕಳು ಮೊಬೈಲ್ ಇಲ್ಲದೇ ಊಟ – ತಿಂಡಿ ಮಾಡುವುದಿಲ್ಲ. ಮಗುವಿಗೆ ಅಂಟಿಕೊಂಡಿರೋ ಈ ಮೊಬೈಲ್ ಚಟವನ್ನು ನೀವು ಬಿಡಿಸಲೇಬೇಕು. ಇಲ್ಲದೇ ಹೋದ್ರೆ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆಗಳಾಗುತ್ತವೆ.
ಮಕ್ಕಳ ಮೊಬೈಲ್ ಚಟ ಬಿಡಿಸೋದು ಹೇಗೆ ?
ಇಂಟರ್ನೆಟ್ ಯುಗದಲ್ಲಿ ಎಲ್ಲರೂ ಪುಸ್ತಕಗಳಿಂದ ದೂರವಾಗಿಬಿಟ್ಟಿದ್ದಾರೆ. ಮಕ್ಕಳಿಗಾಗಿ ಹೆತ್ತವರು ಇನ್ನಾದರೂ ಪುಸ್ತಕ ಓದಲು ಶುರುಮಾಡಬೇಕು. ನೀವು ಮಕ್ಕಳ ಮುಂದೆ ಪುಸ್ತಕ ಓದಿದರೆ ಮಕ್ಕಳು ಸಹ ನಿಮ್ಮನ್ನು ಅನುಕರಿಸುತ್ತಾರೆ. ನಿಧಾನವಾಗಿ ಅವರಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಲಾರಂಭಿಸುತ್ತದೆ.
ಮಕ್ಕಳನ್ನು ನಿಸರ್ಗಕ್ಕೆ ಹತ್ತಿರ ತಂದಷ್ಟೂ ಅವರು ಮೊಬೈಲ್ ನಿಂದ ದೂರವಿರುತ್ತಾರೆ. ನಮ್ಮ ಜೀವನದಲ್ಲಿ ನೈಸರ್ಗಿಕ ವಸ್ತುಗಳ ಪ್ರಾಮುಖ್ಯತೆಯನ್ನು ಅವರಿಗೆ ತಿಳಿಸಿ. ಪ್ರಕೃತಿಯ ಸೌಂದರ್ಯವನ್ನು ಪರಿಚಯಿಸಲು ಉದ್ಯಾನವನ, ಸರೋವರ ಅಥವಾ ಗಿರಿಧಾಮಕ್ಕೆ ಕರೆದುಕೊಂಡು ಹೋಗಿ.
ಕೊರೊನಾ ಸೋಂಕು ಮತ್ತು ಲಾಕ್‌ಡೌನ್‌ನಿಂದಾಗಿ ಮಕ್ಕಳು ವರ್ಷಗಟ್ಟಲೆ ಮನೆಯಲ್ಲೇ ಬಂಧಿಯಾಗಿದ್ದರು. ಮನರಂಜನೆಗಾಗಿ ಮೊಬೈಲ್ ಗೆ ಒಗ್ಗಿಕೊಂಡಿದ್ದರು. ಅದರ ಜೊತೆಗೆ ಆನ್ ಲೈನ್ ಕ್ಲಾಸ್ ಕೂಡ ಇದ್ದಿದ್ದರಿಂದ ಸೆಲ್ ಫೋನ್ ಬಳಕೆ ಅನಿವಾರ್ಯವಾಯ್ತು. ಹಾಗಾಗಿ ಹೊರಗೆ ಹೋಗಿ ಸ್ನೇಹಿತರೊಂದಿಗೆ ಆಡುವ ಅಭ್ಯಾಸವೇ ಅವರಿಗೆ ತಪ್ಪಿ ಹೋಗಿದೆ. ಇನ್ಮೇಲಾದ್ರೂ ಪೋಷಕರು ಹೊರಾಂಗಣ ಆಟಗಳಿಗೆ ಪ್ರೋತ್ಸಾಹ ನೀಡಬೇಕು. ಹೀಗೆ ಮಾಡುವುದರಿಂದ ಮೊಬೈಲ್ ನಿಂದ ಬೇರೆಡೆಗೆ ಅವರ ಗಮನ ಸೆಳೆಯಬಹುದು.
ಈ ಪ್ರಯತ್ನಗಳ ಹೊರತಾಗಿಯೂ ಮಗು ಮೊಬೈಲ್ ಫೋನ್ ಬಳಸುವುದನ್ನು ನಿಲ್ಲಿಸದಿದ್ದರೆ, ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಿ. ಮಗು ಮೊಬೈಲ್ ಓಪನ್ ಮಾಡದಂತೆ ಪಾಸ್ ವರ್ಡ್ ಹಾಕಿಬಿಡಿ. ನೀವು ಕೂಡ ಮೊಬೈಲ್ ನಿಂದ ಆದಷ್ಟು ದೂರವಿದ್ದು, ಮಕ್ಕಳ ಜೊತೆ ಸಮಯ ಕಳೆಯಿರಿ.