ಬಿರು ಬೇಸಿಗೆಯಿಂದ ಜನರು ತತ್ತರಿಸಿ ಹೋಗ್ತಿದ್ದಾರೆ. ತಾಪಮಾನ ಹೆಚ್ಚಾದಂತೆ ಮಾರುಕಟ್ಟೆಯಲ್ಲಿ ಎಸಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹಗಲು ಕಛೇರಿಯಲ್ಲಿ, ಸಂಜೆ ಮನೆಯಲ್ಲಿ, ಕಾರು, ಬಸ್ಸು, ರೈಲಿನಲ್ಲಿ ದಿನವಿಡೀ ಎಸಿಯಲ್ಲಿಯೇ ಇರಲು ನಾವೆಲ್ಲ ಇಷ್ಟಪಡುತ್ತೇವೆ. ಎಸಿ ಗಾಳಿ ಸೇವಿಸಿದಾಗ ತುಂಬಾ ರಿಲ್ಯಾಕ್ಸ್ ಎನಿಸುತ್ತದೆ. ಆದರೆ ಅತಿಯಾದ ಎಸಿ ಬಳಕೆ ಆರೋಗ್ಯಕ್ಕೆ ಅಪಾಯಕಾರಿ.
ಸುಡುವ ಶಾಖದಿಂದ ಪರಿಹಾರ ಸಿಕ್ಕರೂ, ಎಸಿ ರೂಮ್ನಲ್ಲೇ ನೀವು ಹೆಚ್ಚಿನ ಸಮಯ ಕಳೆಯುತ್ತಿದ್ದರೆ ಅದನ್ನು ತಪ್ಪಿಸಿ. ಹವಾನಿಯಂತ್ರಕಗಳ ಗಾಳಿಯು ಅತಿಯಾಗಿ ಶುಷ್ಕವಾಗಿರುತ್ತದೆ, ಇದರಿಂದಾಗಿ ಬಾಯಿ ಒಣಗಬಹುದು ಮತ್ತು ಕಿರಿಕಿರಿ ಉಂಟಾಗುತ್ತದೆ. ಅದಕ್ಕಾಗಿಯೇ ನೀವು ಆಗಾಗ ಎಸಿ ಕೋಣೆಯಿಂದ ಹೊರಗೆ ಹೋಗಬೇಕು. ಎಸಿ ಕೋಣೆಯಲ್ಲಿ ಇರುವ ತೇವಾಂಶ ಆವಿಯಾಗುತ್ತದೆ, ಇದು ಬಾಯಾರಿಕೆಯನ್ನು ಉಂಟುಮಾಡುತ್ತದೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಆದ್ದರಿಂದ ಹೆಚ್ಹೆಚ್ಚು ನೀರು ಕುಡಿಯಿರಿ.
ಹವಾನಿಯಂತ್ರಿತ ಕೋಣೆಯಲ್ಲಿ ಹೆಚ್ಚು ಸಮಯ ಕಳೆಯುವವರು ತಲೆನೋವಿನಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿಯೇ ಎಸಿಯ ತಾಪಮಾನವನ್ನು ಸಾಮಾನ್ಯವಾಗಿ ಇಡಬೇಕು. ಹಗಲು-ರಾತ್ರಿ ಹವಾನಿಯಂತ್ರಿತ ಕೊಠಡಿಗಳು ಮತ್ತು ಕಾರುಗಳಲ್ಲಿ ಯಾವಾಗಲೂ ಕುಳಿತುಕೊಳ್ಳುವ ಜನರು, ಉಳಿದವರಿಗಿಂತ ಹೆಚ್ಚು ಆಯಾಸ ಮತ್ತು ದೌರ್ಬಲ್ಯವನ್ನು ಎದುರಿಸಬೇಕಾಗುತ್ತದೆ.