ದಿನಕ್ಕೊಂದು ಸೇಬು ಸೇವನೆ ಮಾಡಿದ್ರೆ ವೈದ್ಯರಿಂದ ದೂರವಿರಬಹುದೆಂಬ ಮಾತಿದೆ. ಆದ್ರೆ ಇತ್ತೀಚೆಗೆ ನಡೆದ ಅಧ್ಯಯನವೊಂದು ದಿನಕ್ಕೊಂದು ಕಿತ್ತಳೆ ಹಣ್ಣು ತಿನ್ನುವುದರಿಂದ ಮಾನಸಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬ ವಿಷಯ ತಿಳಿಸಿದೆ. ಸಂಶೋಧಕರ ಪ್ರಕಾರ ದಿನವೂ ಕಿತ್ತಳೆ ಹಣ್ಣು ತಿನ್ನುವುದರಿಂದ ವಯಸ್ಸಾದ ಮೇಲೆ ಮರೆಯುವ ಸಮಸ್ಯೆ ಕಾಡುವುದಿಲ್ಲವಂತೆ.
ಅಧ್ಯಯನದ ವರದಿ ಪ್ರಕಾರ, ವಯಸ್ಸಾದ ಮೇಲೆ ಬುದ್ಧಿಮಾಂದ್ಯ ರೋಗ ಬರದಂತೆ ಕಾಪಾಡುತ್ತದೆಯಂತೆ. ಸಂಶೋಧಕರ ಪ್ರಕಾರ ಕಿತ್ತಳೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿರುತ್ತದೆ. ಅದ್ರಲ್ಲಿರುವ ರಾಸಾಯನಿಕ ಅಂಶವೊಂದು ನೆನಪಿನ ಶಕ್ತಿ ಹಾಳಾಗದಂತೆ ನೋಡಿಕೊಳ್ಳುತ್ತದೆ.
ಪ್ರಾಣಿಗಳ ಮೇಲೆ ಪರೀಕ್ಷೆ ನಡೆಸಿದ ಸಂಶೋಧಕರು, ವಯಸ್ಸಾದಂತೆ ನೆನಪಿನ ಶಕ್ತಿ ಕಡಿಮೆ ಮಾಡುವ ಅಂಶವನ್ನು ಕಿತ್ತಳೆ ನಿಯಂತ್ರಣದಲ್ಲಿಡುತ್ತದೆ ಎಂದಿದ್ದಾರೆ. 13 ಸಾವಿರಕ್ಕೂ ಹೆಚ್ಚು ಹಿರಿಯ ವಯಸ್ಸಿನ ಪುರುಷರು ಹಾಗೂ ಮಹಿಳೆಯರ ಮೇಲೆ ಹಲವಾರು ವರ್ಷಗಳ ಕಾಲ ಅಧ್ಯಯನ ನಡೆಸಿದ ಸಂಶೋಧಕರು ಪ್ರತಿದಿನ ಕಿತ್ತಳೆ ಸೇವನೆ ಮಾಡದವರಿಗಿಂತ ಪ್ರತಿದಿನ ಕಿತ್ತಳೆ ತಿನ್ನುವವರಲ್ಲಿ ಶೇಕಡಾ 23ರಷ್ಟು ಬುದ್ದಿಮಾಂದ್ಯ ಸಮಸ್ಯೆ ಅಪಾಯ ಕಡಿಮೆ ಎಂದಿದ್ದಾರೆ.