ನಮ್ಮಲ್ಲಿ ಚಹಾ ಪ್ರಿಯರು ಸಾಕಷ್ಟಿದ್ದಾರೆ. ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಟೀ ಬೇಕೇ ಬೇಕು. ಚಹಾ ನಿಮಗೆ ಅದೆಷ್ಟೇ ಪ್ರಿಯವಾಗಿದ್ದರೂ ಅದನ್ನು ಮಿತವಾಗಿ ಕುಡಿಯಬೇಕು. ದಿನಕ್ಕೆ ಒಂದು ಅಥವಾ ಎರಡು ಕಪ್ ಟೀ ಕುಡಿದರೆ ಅಂಥಾ ಸಮಸ್ಯೆ ಏನಿಲ್ಲ.
ದಿನಕ್ಕೆ 4 ಕಪ್‌ಗಿಂತ ಹೆಚ್ಚು ಚಹಾ ಕುಡಿಯುವವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅತಿಯಾದ ಚಹಾ ಸೇವನೆಯಿಂದಾಗುವ ಮೊದಲನೆ ಸಮಸ್ಯೆ ಎಂದರೆ ಉದರ ಬಾಧೆ. ನಿಮಗೆ ಸರಿಯಾಗಿ ಹಸಿವಾಗದೇ ಇರಬಹುದು. ಇದಲ್ಲದೆ ನಿಮ್ಮ ಕರುಳಿನ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುತ್ತದೆ.
ಅತಿಯಾಗಿ ಟೀ ಕುಡಿಯುವುದು ನಮ್ಮ ಮನಸ್ಸಿನ ಆತಂಕ ಹಾಗೂ ಉದ್ವೇಗವನ್ನು ಕೂಡ ಹೆಚ್ಚಿಸುತ್ತದೆ. ಚಹಾದಲ್ಲಿರುವ ಕೆಫೀನ್ ಅಂಶ ನಿಮ್ಮ ದೇಹವನ್ನು ಪ್ರವೇಶಿಸಿದಾಗ ಆರೋಗ್ಯಕ್ಕೆ ಅನೇಕ ರೀತಿಯ ಹಾನಿ ಉಂಟಾಗುತ್ತದೆ. ಅತಿಯಾಗಿ ಟೀ ಕುಡಿಯುವುದು ಕರುಳಿಗೆ ಹಾನಿಕಾರಕ. ಚಹಾ, ಆಹಾರವನ್ನು ಜೀರ್ಣಿಸಿಕೊಳ್ಳುವಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.
ನಿಮಗೆ ಎದೆ ಉರಿ, ಆಸಿಡಿಟಿಯಂತಹ ಸಮಸ್ಯೆಗಳು ಕೂಡ ಶುರುವಾಗುವ ಸಾಧ್ಯತೆ ಇರುತ್ತದೆ. ಅತಿಯಾಗಿ ಟೀ ಕುಡಿಯುವುದರಿಂದ ನಿದ್ರಾಹೀನತೆ ಉಂಟಾಗುತ್ತದೆ. ಸಾಕಷ್ಟು ನಿದ್ರೆ ಮಾಡದಿದ್ದರೆ ಬೇರೆ ಬೇರೆ ತೆರನಾದ ಆರೋಗ್ಯ ಸಮಸ್ಯೆಗಳಿಗೆ ನೀವು ತುತ್ತಾಗುತ್ತೀರಿ. ದಿನಕ್ಕೆ 2 ಕಪ್ ಚಹಾ ಸಾಕು. ಅದಕ್ಕಿಂತ ಹೆಚ್ಚು ಚಹಾ ಸೇವನೆಯ ಅಭ್ಯಾಸವಿದ್ದರೆ ಇವತ್ತೇ ಬಿಟ್ಟುಬಿಡಿ.