ನೀರು ನಮ್ಮ ದೇಹಕ್ಕೆ ಬೇಕೇ ಬೇಕು. ಆದ್ರೆ ದಿನಕ್ಕೆ ಎಷ್ಟು ನೀರು ಕುಡಿಯಬೇಕು? ನಮ್ಮ ದೇಹಕ್ಕೆಷ್ಟು ಅಗತ್ಯವಿದೆ ಅನ್ನೋದೇ ಎಲ್ಲರನ್ನೂ ಕಾಡುವ ಗೊಂದಲ. ದಿನಕ್ಕೆ ಕಡಿಮೆ ಅಂದ್ರೂ 8 ಲೋಟ ನೀರು ಕುಡಿಯಬೇಕು ಅನ್ನೋ ಭಾವನೆ ಎಲ್ಲರಲ್ಲೂ ಇದೆ.
ನೀವು ಮೂತ್ರ ವಿಸರ್ಜಿಸಿದಾಗ, ಬೆವರಿನಲ್ಲಿ ಮತ್ತು ಉಸಿರಿನಲ್ಲಿ ಕುಡಿದ ನೀರು ಹೊರಹೋಗುತ್ತದೆ. ಹಾಗಾಗಿ ನೀರು ಕುಡಿಯುತ್ತಿರಬೇಕು. ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯದೇ ಇದ್ದಲ್ಲಿ ತಲೆನೋವು, ಬಾಯಿ ಒಣಗುವಿಕೆ, ಹಳದಿ ಮೂತ್ರ, ಹೃದಯಬಡಿತದಲ್ಲಿ ಏರುಪೇರಾಗಬಹುದು.
ಆದ್ರೆ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು ಅನ್ನೋದು ಒಬ್ಬೊಬ್ಬರಿಗೆ ಒಂದೊಂದು ತೆರನಾಗಿರುತ್ತದೆ. ನಿಮ್ಮ ನಿತ್ಯದ ಕಾರ್ಯ ಹೇಗಿರುತ್ತೆ? ನೀವಿರುವ ಪ್ರದೇಶದಲ್ಲಿ ಸೆಕೆಯಿದ್ಯಾ ಅಥವಾ ಚಳಿಯ ವಾತಾವರಣವಿದೆಯಾ? ಅನ್ನೋದನ್ನು ನೀರಿನ ಪ್ರಮಾಣ ಅವಲಂಬಿಸಿರುತ್ತದೆ. ಗರ್ಭಿಣಿಯಾಗಿದ್ದರೆ ಅಥವಾ ಚಿಕಿತ್ಸೆ ಪಡೆಯುತ್ತಿದ್ದರೆ ಅವರ ನೀರಿನ ಅಗತ್ಯವೇ ಬೇರೆಯಾಗಿರುತ್ತದೆ.
ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಸಿನ್ ಪ್ರಕಾರ ಮಹಿಳೆಯರು ದಿನಕ್ಕೆ 2.69 ಲೀಟರ್ ನೀರು ಕುಡಿಯಬೇಕು. ನಮಗೆ ಎಷ್ಟು ನೀರು ಬೇಕು ಅನ್ನೋದನ್ನು ಬಾಯಾರಿಕೆ ಮೇಲೂ ಅಳೆಯಬಹುದು. ಅಥ್ಲೀಟ್ ಆಗಿದ್ದಲ್ಲಿ ಸ್ವಲ್ಪ ಜಾಸ್ತಿ ನೀರು ಕುಡಿಯಬೇಕಾಗುತ್ತದೆ.
ಹಾಗಂತ ಅಗತ್ಯವಿಲ್ಲದಿದ್ದರೂ ಅಧಿಕ ನೀರು ಕುಡಿಯಬೇಡಿ. ಇದು ನಿಮ್ಮ ಪ್ರಾಣಕ್ಕೇ ಅಪಾಯ ಉಂಟುಮಾಡಬಹುದು. ಹಾಗಾಗಿ ದಿನಕ್ಕೆ ಇಷ್ಟೇ ನೀರು ಕುಡಿಯಬೇಕೆಂದು ಲೆಕ್ಕ ಇಟ್ಟುಕೊಳ್ಳಬೇಡಿ. ಬಾಯಾರಿಕೆ ಆದಾಗಲೆಲ್ಲ ನೀರು ಕುಡಿಯಿರಿ.