ಜೆ.ಎಚ್. ಪಟೇಲ್ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 1997 ಆಗಸ್ಟ್ 15ರಂದು ಅವಿಭಜಿತ ಶಿವಮೊಗ್ಗ ಜಿಲ್ಲೆಯನ್ನು ವಿಭಜಿಸಿ ಹೊನ್ನಾಳಿ ಹಾಗೂ ಚನ್ನಗಿರಿಯನ್ನು ದಾವಣಗೆರೆಗೆ ಸೇರಿಸುವ ಮೂಲಕ ದಾವಣಗೆರೆಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದ್ದರು.
ಈ ಕಾರ್ಯವಾಗಿ ಇಂದಿಗೆ 25 ವರ್ಷಗಳಾಗಿದ್ದು, ಶಿವಮೊಗ್ಗ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಹೊನ್ನಾಳಿಯ ಬಹುತೇಕ ಜನರಿಗೆ ಈಗಲೂ ಶಿವಮೊಗ್ಗವೇ ಅಚ್ಚುಮೆಚ್ಚಾಗಿದೆ. ತಾಲೂಕು ಕೇಂದ್ರವಾದ ಹೊನ್ನಾಳಿ ಶಿವಮೊಗ್ಗಕ್ಕೆ ಕೇವಲ 40 ಕಿಮೀ ಅಂತರದಲ್ಲಿದ್ದು, ದಾವಣಗೆರೆ 60 ಕಿಲೋಮೀಟರ್ಗಳಾಗುತ್ತದೆ. ಅಲ್ಲದೆ ಹೊನ್ನಾಳಿ ತಾಲೂಕಿನ ಪ್ರಮುಖ ಕೇಂದ್ರಗಳಾದ ಸವಳಂಗ, ಚೀಲೂರು ಸಹ ಶಿವಮೊಗ್ಗಕ್ಕೆ ಅತಿ ಸಮೀಪದಲ್ಲಿದೆ.
ಹೀಗಾಗಿ ವ್ಯವಹಾರಿಕವಾಗಿ ಹೊನ್ನಾಳಿ ತಾಲೂಕಿನ ಜನತೆ ಈಗಲೂ ಶಿವಮೊಗ್ಗವನ್ನೇ ನೆಚ್ಚಿಕೊಂಡಿದ್ದು, ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ಜಿಲ್ಲಾ ಕೇಂದ್ರವಾದ ದಾವಣಗೆರೆಗೆ ಹೋಗಬೇಕಾಗುತ್ತದೆ. ಒಟ್ಟಿನಲ್ಲಿ ದಾವಣಗೆರೆ ಜಿಲ್ಲೆಗೆ ಸೇರ್ಪಡೆಗೊಂಡ 25 ವರ್ಷಗಳ ಬಳಿಕವೂ ಹೊನ್ನಾಳಿ ತಾಲೂಕಿನ ಬಹುತೇಕ ಜನತೆಗೆ ಶಿವಮೊಗ್ಗ ಅಚ್ಚುಮೆಚ್ಚಿನ ತಾಣವಾಗಿದೆ.