ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳು ವಿರುಪಾಕ್ಷಪ್ಪನವರ ಕಚೇರಿ ಮೇಲೆ ಗುರುವಾರದಂದು ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಶಾಸಕರ ಪುತ್ರ ಪ್ರಶಾಂತ್ ಅವರಿಂದ 40 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ ನಿವಾಸದಲ್ಲಿಯೂ ಸಹ ಯಾವುದೇ ಲೆಕ್ಕ ಇರದ ಕೋಟ್ಯಾಂತರ ರೂಪಾಯಿ ನಗದು ಪತ್ತೆಯಾಗಿದೆ.
ಕಚೇರಿ ಮತ್ತು ಮನೆಯಲ್ಲಿ ಒಟ್ಟು 7.62 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎಂದು ಹೇಳಲಾಗಿದ್ದು, ಲೋಕಾಯುಕ್ತದ ಇತಿಹಾಸದಲ್ಲೇ ಇಷ್ಟೊಂದು ಹಣ ಸಿಕ್ಕಿರುವುದು ಇದೇ ಮೊದಲು ಎನ್ನಲಾಗಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ನಡೆದಿರುವ ಈ ಘಟನೆ ಬಿಜೆಪಿ ನಾಯಕರನ್ನು ಮುಜುಗರಕ್ಕೆ ಸಿಲುಕಿಸಿದೆ.
ಇದರ ಮಧ್ಯೆ ದಾಳಿ ಮಾಡಿದ ವೇಳೆ ಮಾಡಾಳು ವಿರೂಪಾಕ್ಷಪ್ಪನವರ ಪುತ್ರ ಪ್ರಶಾಂತ್ ಮಾಡಿದ ಕೆಲಸವೊಂದನ್ನು ಕಂಡು ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತರು ಕಚೇರಿ ಪ್ರವೇಶಿಸುತ್ತಿದ್ದಂತೆಯೇ ಪ್ರಮುಖ ದಾಖಲೆಗಳಿದ್ದ ಕಾಗದವನ್ನು ಪ್ರಶಾಂತ್ ನುಂಗಿದ್ದು ಕೂಡಲೇ ಅದನ್ನು ಅಧಿಕಾರಿಗಳು ಕಕ್ಕಿಸಿದ್ದಾರೆ.
ಈ ದಾಳಿ ಇಂದೂ ಕೂಡ ಮುಂದುವರೆದಿದ್ದು, ಪ್ರಶಾಂತ್ ಅವರ ಕಚೇರಿ ಹಾಗೂ ಮನೆಯನ್ನು ತಪಾಸಣೆ ಮಾಡಲಾಗುತ್ತಿದೆ. ಈ ವೇಳೆ ಹಲವು ಮಹತ್ವದ ದಾಖಲೆ ಪತ್ರಗಳು ಅಧಿಕಾರಿಗಳಿಗೆ ಸಿಕ್ಕಿವೆ ಎನ್ನಲಾಗಿದೆ. ಶಾಸಕ ಮಾಡಾಳು ವಿರೂಪಾಕ್ಷಪ್ಪನವರಿಗೂ ಈ ದಾಳಿ ಸಂಕಷ್ಟ ತಂದೊಡ್ಡಲಿದೆ ಎಂದು ಹೇಳಲಾಗಿದೆ.