ದಾಳಿಂಬೆ ಹಣ್ಣು ಹಾಗು ಅದರ ಸಿಪ್ಪೆಯ ಬಹೂಪಯೋಗಗಳ ಬಗ್ಗೆ ನಿಮಗೆ ತಿಳಿದೇ ಇದೆ. ದಾಳಿಂಬೆ ಎಲೆಗಳನ್ನು ಕಾಮಾಲೆ, ಅತಿಸಾರ, ಹೊಟ್ಟೆ ನೋವು, ನಿದ್ರಾಹೀನತೆ ಮತ್ತಿತರ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ ಎಂಬುದು ನಿಮಗೆ ಗೊತ್ತೇ?
ದಾಳಿಂಬೆ ಎಲೆಯನ್ನು ಆಯುರ್ವೇದದಲ್ಲೂ ಬಳಸಲಾಗುತ್ತದೆ. ಕೆಮ್ಮು ಮತ್ತು ಶೀತದ ನಿವಾರಣೆಯ ಔಷಧಿಗೆ ಇದನ್ನು ಬಳಸುತ್ತಾರೆ. ಒಂದು ಹಿಡಿ ದಾಳಿಂಬೆ ಎಲೆಗಳನ್ನು ತೊಳೆದು, 1 ಗ್ಲಾಸ್ ನೀರು ಸೇರಿಸಿ ಕುದಿಸಿ ಸೋಸಿ ನೀರು ತಣ್ಣಗಾದ ಮೇಲೆ ದಿನಕ್ಕೆರಡು ಬಾರಿಯಂತೆ ಕುಡಿಯಬಹುದು. ಇದು ಕೆಮ್ಮನ್ನು ನಿವಾರಿಸಿ ಗಂಟಲಿನ ಸೋಂಕು ಹಾಗೂ ಕಫವನ್ನು ತೆಗೆದು ಹಾಕುತ್ತದೆ.
ದಾಳಿಂಬೆ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ. ಒಂದು ಲೋಟ ನೀರು ಅರ್ಧಕ್ಕಿಳಿಯಲಿ. ತಣಿದ ಬಳಿಕ ಇದನ್ನು ಸೇವಿಸಿ ಅರ್ಧ ಗಂಟೆ ಹೊತ್ತು ಬಿಟ್ಟು ಮಲಗಿ. ಇದರಿಂದ ಗಾಢವಾದ ಮತ್ತು ಸುಖವಾದ ನಿದ್ರೆ ನಿಮ್ಮದಾಗುತ್ತದೆ.
ಇದರ ಎಲೆಯನ್ನು ಸ್ವಚ್ಛವಾಗಿ ತೊಳೆದು ಮಿಕ್ಸಿಯಲ್ಲಿ ರುಬ್ಬಿ ತುರಿಕೆ ಅಥವಾ ಉರಿಯಿರುವ ಜಾಗಕ್ಕೆ ಹಚ್ಚಿ ಒಣಗಲು ಬಿಡಿ. ಬಳಿಕ ಸ್ವಚ್ಛವಾದ ಬಟ್ಟೆಯಿಂದ ಒರೆಸಿ ತೆಗೆಯಿರಿ. ನೀರು ತಾಗಿಸದಿರಿ. ಇದರಿಂದ ತುರಿಕೆ ಕಡಿಮೆಯಾಗುತ್ತದೆ