ಶಾಲೆಯಿಂದ ಮನೆಗೆ ಮರಳುತ್ತಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ 25,000 ರೂಪಾಯಿ ಮೌಲ್ಯದ ಚಿನ್ನದ ಉಂಗುರ ಸಿಕ್ಕಿದ್ದು, ಅದನ್ನು ಶಿಕ್ಷಕರ ಬಳಿ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ಇಂಥದೊಂದು ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕರೂರು ಹೋಬಳಿಯಲ್ಲಿ ನಡೆದಿದೆ.
ಕೃಷಿಕ ಹೊನಗೋಡು ಉಮೇಶ್ – ಮೀನಾಕ್ಷಿ ದಂಪತಿಯ ಪುತ್ರ ಕಾರ್ತಿಕ್ ಪ್ರಾಮಾಣಿಕತೆ ಮೆರೆದು ಎಲ್ಲರ ಮೆಚ್ಚುಗೆ ಪಾತ್ರನಾಗಿರುವ ವಿದ್ಯಾರ್ಥಿಯಾಗಿದ್ದು, ಈತ ಕಾರಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಇತ್ತೀಚೆಗೆ ಈತ ಶಾಲೆ ಮುಗಿಸಿಕೊಂಡು ಮನೆಗೆ ತೆರಳುವಾಗ ದಾರಿಯಲ್ಲಿ ಈ ಉಂಗುರ ಸಿಕ್ಕಿತ್ತು. ಅದನ್ನು ಜೋಪಾನವಾಗಿ ತನ್ನ ಬ್ಯಾಗಿನಲ್ಲಿ ಇರಿಸಿಕೊಂಡಿದ್ದ ಕಾರ್ತಿಕ್ ಮರುದಿನ ಶಿಕ್ಷಕರ ಬಳಿ ನೀಡಿದ್ದಾನೆ. ವಿದ್ಯಾರ್ಥಿಯ ಪ್ರಾಮಾಣಿಕತೆ ಮೆಚ್ಚಿದ ಶಿಕ್ಷಕ ಗೋಪಾಲ್ ಆತನಿಗೆ ಪುಸ್ತಕ ಬಹುಮಾನ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಉಂಗುರದ ವಾರಸುದಾರರು ಇನ್ನೂ ಪತ್ತೆಯಾಗಿಲ್ಲವಾದ ಕಾರಣ ಅದು ಶಿಕ್ಷಕರ ಬಳಿಯೇ ಇದ್ದು, ವಾರಸುದಾರರು ಬಾರದಿದ್ದ ಪಕ್ಷದಲ್ಲಿ ಅದನ್ನು ಪೊಲೀಸ್ ಠಾಣೆಗೆ ಒಪ್ಪಿಸುವುದಾಗಿ ತಿಳಿಸಿದ್ದಾರೆ.