ಬೆಂಗಳೂರು- ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಅಕ್ಷರಶಃ ಬೆಂಗಳೂರು ಕೊಚ್ಚಿ ಹೋಗ್ತಾ ಇದೆ. ಅಪಾರ್ಟ್ಮೆಂಟ್ ಗಳು, ಮನೆಗಳಿಗೆ ನೀರು ನುಗ್ಗಿ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ. ಒಂದೊತ್ತಿನ ಊಟಕ್ಕೂ ಕಷ್ಟ ಪಡುವಂತಾಗಿದೆ. ಇನ್ನು ರಸ್ತೆಗಳಲ್ಲಿ ನೀರು ನಿಂತು ರಸ್ತೆಗಳೆಲ್ಲಾ ಕೆರೆಯಂತಾಗಿವೆ.
ಇನ್ನು ಈ ತಿಂಗಳ ಮಳೆ ದಾಖಲೆ ಪ್ರಮಾಣದ ಮಳೆಯಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಭಾರಿ ಮಳೆ ಆಗಿದೆ. ಮಹದೇವಪುರ ವಲಯದಲ್ಲಿ ಹೆಚ್ಚಿನ ಮಳೆಯಾಗಿದ್ದು ನಿನ್ನೆಯೂ ಭಾರೀ ಮಳೆ ಆಗಿದೆ.
ಬೊಮ್ಮನಹಳ್ಳಿ, ಬೆಂಗಳೂರು ಈಸ್ಟ್ ವಲಯದಲ್ಲಿ ಹೆಚ್ಚಿನ ಮಳೆ ಆಗಿದೆ. ಈ ಬಾರಿಯ ಮಳೆಗಾಲದಲ್ಲಿ 709 ಎಂ ಎಂ ಮಳೆಯಾಗಿದ್ದು, ಪ್ರತಿ ವರ್ಷಕ್ಕಿಂತ ಈ ಬಾರಿ ಎರಡುವರೆ ಪಟ್ಟು ಹೆಚ್ಚು ಮಳೆಯಾಗಿದೆ. 1998 ಹೊರತುಪಡಿಸಿದರೆ, 1975 ರ ಮಳೆಗಾಲದಲ್ಲಿ 725 ಮಿಲಿ ಮೀಟರ್ ಮಳೆಯಾಗಿತ್ತು. 2017ರಲ್ಲಿ ಬೊಮ್ಮನಳ್ಳಿಯಲ್ಲಿ ಹೆಚ್ಚು ಮಳೆಯಾಗಿತ್ತು. ಆದರೆ ಈ ವರ್ಷ ಜೂನ್ ನಿಂದ ಸೆಪ್ಟೆಂಬರ್ ವರೆಗೆ 703 ಮಿಲಿ ಮೀಟರ್ ಮಳೆಯಾಗಿದೆ ಎಂದರು.
ಮಹಾದೇವ ಪುರದಲ್ಲಿ 28 ಕಡೆಗಳಲ್ಲಿ ನೀರು ನುಗ್ಗಿದೆ. ಬೊಮ್ಮನಹಳ್ಳಿ 9 ಕಡೆಗೆ ನೀರು ನುಗ್ಗಿ ಹಾನಿಯಾಗಿದೆ. ಈಸ್ಟ್ ಝೋನ್ ನಲ್ಲಿ 24 ಕಡೆ ತೊಂದರೆಯುಂಟಾಗಿದೆ. ಆದ್ರೆ ಬಹಳ ಬೇಗ ನೀರು ನುಗ್ಗಿದ ಜಾಗಗಳು ಕ್ಲಿಯರ್ ಆಗಿದೆ. ಈಗಲೂ ಹಲವು ಭಾಗಗಳಲ್ಲಿ ನೀರು ನಿಂತು ಸಮಸ್ಯೆಯಾಗಿದೆ. ನಾನು ಬಹಳಷ್ಟು ಕಡೆ ಭೇಟಿ ನೀಡಿ ಬಂದಿದ್ದೇನೆ. 44 ಪಂಪ್ ಗಳಿಂದ ನೀರು ಹೊರ ಹಾಕುವ ಕೆಲಸ ಮಾಡುತ್ತಿದ್ದೇವೆ. ರಕ್ಷಣೆ ಕಾರ್ಯಾಚರಣೆ ನಡೆಯುತ್ತಿದ್ದು ಬೋಟ್ ಗಳ ಸಹಾಯದಿಂದ ಜನರಿಗೆ ರಕ್ಷಣೆ ನೀಡಲಾಗುತ್ತಿದೆ ಎಂದರು.