ದಾಖಲೆಯಿಲ್ಲದೆ ಅಕ್ರಮವಾಗಿ ಖಾಸಗಿ ಬಸ್ ನಲ್ಲಿ ಹಣ ಸಾಗಿಸುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶನಿವಾರ ರಾತ್ರಿ ಹುಬ್ಬಳ್ಳಿಯ ಉಪನಗರ ಠಾಣೆ ಪೊಲೀಸರು ರಿತಿಕ್ ಎಂಬ ವಿದ್ಯಾರ್ಥಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಈತ ವಿ ಆರ್ ಎಲ್ ಬಸ್ ನಲ್ಲಿ ಮಂಗಳೂರಿಗೆ ತೆರಳುತ್ತಿದ್ದ ಎನ್ನಲಾಗಿದ್ದು, ಎರಡು ಬ್ಯಾಗುಗಳಲ್ಲಿ ಬರೋಬ್ಬರಿ 1.14 ಕೋಟಿ ರೂಪಾಯಿಗಳನ್ನು ಸಾಗಿಸುತ್ತಿದ್ದ. ತಮಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ವಿದ್ಯಾರ್ಥಿ ರಿತಿಕ್, ಹುಬ್ಬಳ್ಳಿಯ ಕೇಶ್ವಾಪುರದ ಮಯೂರಿ ಎಸ್ಟೇಟ್ ನಿವಾಸಿ ಎನ್ನಲಾಗಿದ್ದು, ವಿಚಾರಣೆ ವೇಳೆ ತಾನು ಮಂಗಳೂರಿನಲ್ಲಿ ಬಂಗಾರ ಖರೀದಿಸುವ ಸಲುವಾಗಿ ಈ ಹಣವನ್ನು ತೆಗೆದುಕೊಂಡು ಹೊರಟಿದ್ದೆ ಎಂಬ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.