ನಾಡಹಬ್ಬ ದಸರಾ ಸಂದರ್ಭದಲ್ಲಿ ರಾಜ್ಯದ ಜನತೆಗೆ ಗುಡ್ ನ್ಯೂಸ್ ಸಿಕ್ಕಿದೆ. ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಳಸಾ – ಬಂಡೂರಿ ಯೋಜನೆಗೆ ಈಗ ಕೇಂದ್ರ ಜಲ ಶಕ್ತಿ ಇಲಾಖೆಯೂ ಅನುಮೋದನೆ ನೀಡಿದೆ ಎನ್ನಲಾಗಿದ್ದು, ಆದೇಶ ಪತ್ರ ದೊರೆತ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಈ ಯೋಜನೆಗೆ ಅಂತರ್ ರಾಜ್ಯ ನದಿ ನೀರು ವಿವಾದ ಪ್ರಾಧಿಕಾರ ಮತ್ತು ಕೇಂದ್ರ ಜಲ ಆಯೋಗ ಅನುಮತಿ ನೀಡಿದ್ದು, ಇದೀಗ ಜಲ ಶಕ್ತಿ ಇಲಾಖೆಯ ಅನುಮೋದನೆಯೂ ದೊರೆತಂತಾಗಿದೆ. ನಿರಂತರ ರಜೆಗಳು ಇರುವ ಕಾರಣ ಬಹುತೇಕ ಮುಂದಿನ ವಾರ ಅನುಮೋದನೆಯ ಆದೇಶ ರಾಜ್ಯ ಸರ್ಕಾರದ ಕೈ ಸೇರಲಿದೆ.
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಕಳಸಾ – ಬಂಡೂರಿ ಯೋಜನೆ ಜಾರಿಗೊಳಿಸಲು 20 ವರ್ಷಗಳಿಂದ ಪ್ರಯತ್ನ ನಡೆಸಲಾಗುತ್ತಿತ್ತಾದರೂ ಗೋವಾ ಸರ್ಕಾರದ ತಕಾರಾರಿನಿಂದಾಗಿ ಸ್ಥಗಿತಗೊಂಡಿತ್ತು. ಈ ಯೋಜನೆ ಜಾರಿಗೊಂಡರೆ ಹುಬ್ಬಳ್ಳಿ – ಧಾರವಾಡ, ಗದಗ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ.