ರಾಜ್ಯ ರಾಜಕಾರಣದಲ್ಲಿ ಬಳ್ಳಾರಿಯ ರೆಡ್ಡಿ ಸಹೋದರರದ್ದು ದೊಡ್ಡ ಹೆಸರು. ಇವರ ಜೊತೆಗೆ ಸಹೋದರನಂತೆ ಸಾಥ್ ನೀಡುತ್ತಿರುವುದು ಶ್ರೀರಾಮುಲು. ಮೂವರು ರೆಡ್ಡಿ ಸಹೋದರರೊಂದಿಗೆ ಶ್ರೀರಾಮುಲು ರಾಜಕಾರಣದಲ್ಲಿ ಸಕ್ರಿಯವಾಗಿರುವಾಗಲೇ ಗಣಿ ಹಗರಣದ ಕಾರಣಕ್ಕೆ ಜನಾರ್ದನ ರೆಡ್ಡಿಯವರು ಜೈಲು ಪಾಲಾಗುವಂತಾಗಿತ್ತು.
ಮೊದಲ ಬಾರಿಗೆ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾಗಿದ್ದ ಈ ನಾಲ್ವರ ಜೋಡಿ, ಜನಾರ್ದನ ರೆಡ್ಡಿ ಜೈಲು ಪಾಲಾದ ಬಳಿಕ ಹಿನ್ನಡೆ ಅನುಭವಿಸಿತ್ತು. ಅದರಲ್ಲೂ ಕರುಣಾಕರ ರೆಡ್ಡಿಯವರು ಕಳೆದ ಆರು ವರ್ಷಗಳಿಂದ ಸಹೋದರರಾದ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ ಹಾಗೂ ಶ್ರೀರಾಮುಲು ಅವರಿಂದ ಅಂತರ ಕಾಯ್ದುಕೊಂಡಿದ್ದರು.
ಇದೀಗ ದಶಕಗಳ ನಂತರ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದು, ಕರುಣಾಕರ ರೆಡ್ಡಿಯವರ ಷಷ್ಟ್ಯಬ್ದಿ ಕಾರ್ಯಕ್ರಮ. ಹರಪನಹಳ್ಳಿಯ ಕಾಲೇಜು ಮೈದಾನದಲ್ಲಿ ಭಾನುವಾರದಂದು ಈ ಕಾರ್ಯಕ್ರಮ ನಡೆದಿದ್ದು, ನಾಲ್ವರು ಇದರಲ್ಲಿ ಭಾಗವಹಿಸುವ ಮೂಲಕ ಮತ್ತೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈ ನಾಲ್ವರ ಪುನರ್ಮಿಲನ ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೂ ಕಾರಣವಾಗಿದೆ.