ಬೆಂಗಳೂರು- ಕಾಂಗ್ರೆಸ್ ನಿಂದ ಎಮ್ ಎಲ್ ಸಿ ಸ್ಥಾನಕ್ಕೆ ನಿಂತು ಸೋತ ಕೆಜಿಎಫ್ ಬಾಬು ಇದೀಗ ವಿಧಾನಾಭಾ ಚುನಾವಣೆಗೆ ನಿಲ್ಲಲು ತಯಾರಿ ಮಾಡಿಕೊಂಡಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ಮಾಡ್ತಾ ಇದ್ದು, ಈಗಾಗಲೇ ಈ ಕ್ಷೇತ್ರದ ಮತದಾರರಿಗೆ ಒಂದಿಷ್ಟು ಕೆಲಸಗಳನ್ನು ಮಾಡಿಕೊಡ್ತಾ ಇದ್ದಾರೆ. ಆದರೆ ಇದೀಗ ಇವರ ಎದುರಾಳಿಯಾಗಿ ಈ ಕ್ಷೇತ್ರದ ಮಾಜಿ ಶಾಸಕ ಆರ್.ವಿ.ದೇವರಾಜ್ ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸುತ್ತಾ ಇದ್ದಾರೆ. ಹೀಗಾಗಿ ಕೆ ಜಿ ಎಫ್ ಬಾಬು ಅವರಿಗೆ ಒಂದಿಷ್ಟು ಗೊಂದಲ ಶುರುವಾಗಿದೆ. ಈ ಬೆನ್ನಲ್ಲೇ ಇವರಿಗೆ ಜೆಡಿಎಸ್ ಗಾಳ ಹಾಕುತ್ತಿದ್ದು, ಇದರ ಮುಂದುವರೆದ ಭಾಗವಾಗಿ, ಇಂದು ವಸಂತ ನಗರದಲ್ಲಿರುವ ಕೆಜಿಎಫ್ ಬಾಬು ಮನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭೇಟಿ ನೀಡಿದರು.
ಭೇಟಿ ಬಳಿಕ ಮಾತನಾಡಿದ ಇಬ್ರಾಹಿಂ ದೀಪಾವಳಿ ಹಬ್ಬ ಶುರುವಾಗೋ ಮುಂಚೆ ಲಕ್ಷ್ಮಿ ಪುತ್ರರ ಸಂದರ್ಶನ ಆಗಿದೆ. ನಮ್ರತೆ, ವಿದೇಯತೆ, ಅಹಂಕಾರ ಇಲ್ಲದ ವ್ಯಕ್ತಿತ್ವ ಕೆಜಿಎಫ್ ಬಾಬುದು. ಜನ ಸೇವೆ ಮಾಡುವ ಹಂಬಲ ಇದೆ. ಸರಿಯಾದ ಮಾರ್ಗದರ್ಶನ ಮುಖ್ಯವಾಗಿದೆ. ಹಾಗಾಗಿ ನಾನು ಖುದ್ದು ಅವರ ಮನೆಗೆ ಬಂದಿದ್ದೇನೆ. ಅನೇಕ ವರ್ಷಗಳಿಂದ ಜನ ಸೇವೆ ಮಾಡಿಕೊಂಡು ಬಂದಿದ್ದಾರೆ. ನಾನು ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಜೊತೆ ಮಾತನಾಡುತ್ತೇನೆ ಎಂದರು.
ಇನ್ನು ಇದೇ ವೇಳೆ ಮಾತನಾಡಿದ ಕೆಜಿಎಫ್ ಬಾಬು, ಇಂದು ಸಿಎಂ ಇಬ್ರಾಹಿಂ ಅವರು ಮನೆಗೆ ಬಂದಿದ್ದರು. ಒಂದಿಷ್ಟು ಬ್ಯುಸಿನೆಸ್ ಬಗ್ಗೆ ಮಾತಾಡಿದ್ವಿ. ಜೊತೆಗೆ ಚುನಾವಣೆ ದೃಷ್ಟಿಯಿಂದ ಒಂದು ಸಲಹೆ ನೀಡಿದ್ದಾರೆ, ಯೋಚನೆ ಮಾಡ್ತೀನಿ ಅಂದಿದ್ದೇನೆ. ನಾನು ಹುಟ್ಟಿರುವ ಕ್ಷೇತ್ರ ಚಿಕ್ಕಪೇಟೆ. ಅಲ್ಲಿ ಬಡತನ ಇದೆ, ಅದನ್ನು ಯಾರು ನೋಡಿಲ್ಲ. ನಾನು ಇವಾಗ ಸಹಾಯ ಮಾಡ್ತಾ ಇದ್ದೀನಿ. ನಾನು 5 ಸಾವಿರ ಹಣ ಒಂದು ಮನೆಗೆ ಕೊಡ್ತಾ ಇದ್ದೆ. ಈಗ ಆರ್.ವಿ.ದೇವರಾಜ್ ಗೂಂಡಾಗಳನ್ನು ಬಿಟ್ಟು ತೊಂದರೆ ಮಾಡ್ತಾ ಇದ್ದಾರೆ. ಕಂಪ್ಲೇಂಟ್ ಕೂಡ ಕೊಟ್ಟಿದ್ದಾರೆ. ನಮ್ಮ ತಾಯಿ ಆಸೆ ಇತ್ತು. ಆ ಭಾಗದ ಜನರಿಗೆ, ಬಡವರಿಗೆ ಮನೆ ಕಟ್ಟಬೇಕು ಅಂತ. ಅದರಂತೆ ನಾನು ಮಾಡಲು ಹೊರಟಿದ್ದೇನೆ. ಚಿಕ್ಕಪೇಟೆ ಜನರ ಋಣ ತೀರಿಸಲು ಹೊರಟಿದ್ದೀನಿ. 350 ಕೋಟಿ ಕೊಡೋದು ಸತ್ಯ. ಅದನ್ನು ಯಾರು ತಡೆಯಲು ಆಗಲ್ಲ. ಹೈ ಕೋರ್ಟ್ ನಿರ್ದೇಶನದಂತೆ ಮನೆ ಕಟ್ಟಿ ಕೊಡ್ತೀನಿ ಎಂದ್ರು.