ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿದೆ. ಇದೇ ಕಾರಣಕ್ಕಾಗಿ ದೇಶದಲ್ಲಿ ಮಹಿಳೆಯರ ಶಿಕ್ಷಣಕ್ಕೆ ಅತೀ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಶಿಕ್ಷಣವನ್ನು ಪಡೆಯುವುದು ಈಗಲೂ ಅನೇಕರ ಪಾಲಿಗೆ ಒಂದು ಕನಸಿನ ಮಾತೇ ಆಗಿದೆ. ಅಂತದ್ರಲ್ಲಿ ಸೀತಾಮರ್ಹಿ ಜಿಲ್ಲೆಯ ಡಬ್ಟೋಲ್ ಎಂಬ ಗ್ರಾಮದಲ್ಲಿ ನಡೆದ ಘಟನೆಯು ಹೃದಯಸ್ಪರ್ಶಿ ಆಗಿದೆ.
ತಮ್ಮ ದಲಿತ ಸಮುದಾಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮೆಟ್ರಿಕ್ ಪರೀಕ್ಷೆಯನ್ನು ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಶುಭ ಹಾರೈಸುವ ಸಲುವಾಗಿ ಇಡೀ ಗ್ರಾಮದ ದಲಿತ ಗ್ರಾಮಸ್ಥರು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.
ಪರಿಹಾರ್ ಬ್ಲಾಕ್ನ ಬತುರಾ ಪಂಚಾಯತ್ ವ್ಯಾಪ್ತಿಗೆ ಸೇರಿದ ಡಬ್ಟೋಲ್ ಗ್ರಾಮದಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಈ ಗ್ರಾಮದಲ್ಲಿ 900ಕ್ಕೂ ಅಧಿಕ ದಲಿತರು ಇದ್ದರೂ ಸಹ ಈ ಸಮುದಾಯದ ಯಾವೊಬ್ಬ ಹುಡುಗಿಯೂ ಈವರೆಗೆ ಮೆಟ್ರಿಕ್ ಪರೀಕ್ಷೆಯನ್ನು ಬರೆದಿರಲಿಲ್ಲ. ದೈನಂದಿನ ಕೂಲಿ ನಂಬಿಕೊಂಡೇ ಇರುವ ಕುಟುಂಬಗಳು ಇವಾಗಿರೋದ್ರಿಂದ ಈ ಗ್ರಾಮದಲ್ಲಿ ಶಿಕ್ಷಣದತ್ತ ಅತೀ ಹೆಚ್ಚು ಮನಸ್ಸು ಮಾಡಿದವರ ಸಂಖ್ಯೆ ತುಂಬಾನೇ ಕಡಿಮೆಯಿದೆ.
ಆದರೆ ಇವರೆಲ್ಲರಿಗೂ ಮಾದರಿ ಎಂಬಂತೆ ಇದೇ ಗ್ರಾಮದ ಇಂದಿರಾ ಕುಮಾರಿ ಎಂಬ ದಲಿತ ಬಾಲಕಿ ಬಿಹಾರ ಶಾಲಾ ಪರೀಕ್ಷಾ ಮಂಡಳಿ ನಡೆಸುವ ಮೆಟ್ರಿಕ್ ಪರೀಕ್ಷೆಗೆ ಹಾಜರಾಗಿದ್ದಾರೆ. ಈ ವಿಚಾರ ತಿಳಿದು ಸಂತಸಗೊಂಡ ದಲಿತ ಸಮುದಾಯದ ಜನತೆ ಆಕೆಗೆ ಶುಭ ಹಾರೈಸಲು ಪರೀಕ್ಷಾ ಕೇಂದ್ರದ ಬಳಿ ಜಮಾಯಿಸಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾಗಳಲ್ಲೂ ಸದ್ದು ಮಾಡುತ್ತಿದೆ.