ಮಾರ್ಚ್ 1ರಂದು ಮಹಾಶಿವರಾತ್ರಿಯ ಸಂದರ್ಭದಲ್ಲಿ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಬಂದಿದ್ದ ದಲಿತ ಮಹಿಳೆಯನ್ನು ತಡೆದಿದ್ದಕ್ಕಾಗಿ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಶಿವ ದೇವಾಲಯದ ಅರ್ಚಕನನ್ನು ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪೂಜಾ ಸಾಮಗ್ರಿಗಳನ್ನು ಕೈಯಲ್ಲಿ ಹಿಡಿದಿದ್ದ ದಲಿತ ಮಹಿಳೆ ಪೂಜಾ ಖಂಡೆ ನನಗೆ ದೇವಾಲಯದ ಸಂಕೀರ್ಣದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಿ ಎಂದು ಅರ್ಚಕರು ಸೇರಿದಂತೆ ಅಲ್ಲಿ ನೆರೆದಿದ್ದ ಜನರನ್ನು ಒತ್ತಾಯಿಸುತ್ತಿದ್ದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ನನ್ನನ್ನು ಒಳಗೆ ಬಿಡದಿದ್ದರೆ ನಾನು ಪೊಲೀಸ್ ಠಾಣೆಗೆ ಹೋಗುತ್ತೇನೆ ಎಂದೂ ಪೂಜಾ ಹೇಳುತ್ತಿರುವುದನ್ನು ಕೇಳಬಹುದಾಗಿದೆ.
ದಲಿತರು ದೇಗುಲದ ಒಳಗೆ ಪ್ರವೇಶಿಸಬಾರದೆಂದು ಅರ್ಚಕರು ಹೇಳಿದ್ದರು ಎಂದು ಪೂಜಾ ಖಂಡೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಾನು ಅರ್ಚಕರಿಗೆ ಏನನ್ನೂ ಹೇಳಿರಲಿಲ್ಲ. ಆದರೆ ಅರ್ಚಕರೇ ದಲಿತರು ದೇವಾಲಯವನ್ನು ಪ್ರವೇಶಿಸುವಂತಿಲ್ಲ. ಅವರು ಹೊರಗಿನಿಂದ ಮಾತ್ರ ಪೂಜೆ ಸಲ್ಲಿಸಬೇಕು. ಅವರಿಗೆ ಪೂಜಿಸುವ ಹಕ್ಕಿಲ್ಲ ಎಂದು ಹೇಳಿದ್ದರು. ಯಾಕೆ ದಲಿತರು ದೇವರಿಗೆ ಪೂಜೆ ಸಲ್ಲಿಸಬಾರದಾ..?ಯಾವ ಕಾನೂನು ಅಥವಾ ಸಂವಿಧಾನದಲ್ಲಿ ಈ ರೀತಿ ಬರೆಯಲಾಗಿದೆ..? ಎಂದು ಪೂಜಾ ಪ್ರಶ್ನೆ ಮಾಡಿದ್ದಾರೆ.
ಮೆಂಗಾವ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದಿನೇಶ್ ಖುಶ್ವಾನಾ, ನಾವು ಈ ವಿಚಾರವಾಗಿ ಯಾವುದೇ ದೂರು ಸ್ವೀಕರಿಸಿರಲಿಲ್ಲ. ಆದರೆ ವಿಡಿಯೋ ವೈರಲ್ ಆದ ಬಳಿಕ ಮಹಿಳೆಯನ್ನು ಪತ್ತೆ ಮಾಡಿದ್ದೇವೆ. ಹಾಗೂ ತಪ್ಪಿತಸ್ಥರ ವಿರುದ್ಧ ಸೆಕ್ಷನ್, ಎಸ್/ಎಸ್ಟಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಅರ್ಚಕ ವಿಜಯ್ ಬಾರ್ವೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದೇವೆ ಎಂದು ಹೇಳಿದರು.