ನಾವು ಚಡ್ಡಿ ಸುಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಬಿಜೆಪಿಯ ದಲಿತ ನಾಯಕ ಚಲವಾದಿ ನಾರಾಯಣಸ್ವಾಮಿ, ನಾವು ಚಡ್ಡಿಗಳನ್ನು ಸಂಗ್ರಹಿಸಿ ಕೊಡುತ್ತೇವೆ ಎಂದು ಹೇಳಿದ್ದರಲ್ಲದೆ ಅದೇ ರೀತಿ ತಲೆಮೇಲೆ ಹೊತ್ತು ತಂದಿದ್ದರು. ಇದೀಗ ಈ ವಿಷಯ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಕಾರಣವಾಗಿದೆ.
ಗುರುವಾರದಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಆರ್.ಎಸ್.ಎಸ್. ಈಗಲೂ ಶ್ರೇಣೀಕೃತ ವ್ಯವಸ್ಥೆಯನ್ನು ಜಾರಿಯಲ್ಲಿಟ್ಟಿದೆ. ಹೀಗಾಗಿಯೇ ಬಚ್ಚಲು ಮನೆಯಲ್ಲಿದ್ದ ಹಳೆ ಚಡ್ಡಿಗಳನ್ನು ದಲಿತ ನಾಯಕ ಚಲವಾದಿ ನಾರಾಯಣಸ್ವಾಮಿ ಅವರ ತಲೆಮೇಲೆ ಹೊರಿಸುವ ಮೂಲಕ ವಿಕೃತಿ ಮೆರೆಯಲಾಗಿದೆ ಎಂದು ಆರೋಪಿಸಿದ್ದಾರೆ.
ಆರ್.ಎಸ್.ಎಸ್. ನವರು ಬಿ.ಎಲ್. ಸಂತೋಷ್ ಅವರಿಂದ ಚಡ್ಡಿ ಹೊರಿಸುವ ಕಾರ್ಯ ಮಾಡಿಸಿಲ್ಲ ಬದಲಾಗಿ ದಲಿತ ನಾಯಕನ ಮೇಲೆ ಹೊರಿಸುವ ಮೂಲಕ ಅವಹೇಳನ ಮಾಡಿದ್ದಾರೆ. ಹೀಗಾಗಿ ಇದನ್ನು ಪ್ರತಿಭಟಿಸುವ ಸಲುವಾಗಿ ನಾವು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಚಡ್ಡಿ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.