ಸೂರತ್: ನಿಮ್ಮ ಕುಟುಂಬದ ಸದಸ್ಯರೆಲ್ಲರೂ ಮಲಗಿದ್ದಾರೆ. ನೀವು ನಿಮ್ಮ ಕೋಣೆಯಲ್ಲಿ ಒಬ್ಬರೇ ಮಲಗಿರುತ್ತೀರಾ. ಈ ವೇಳೆ ಇದ್ದಕ್ಕಿದ್ದಂತೆ ಯಾರಾದರೂ ನಿಮ್ಮ ಗಂಟಲಿನ ಬಳಿ ಚಾಕು ಹಿಡಿದಿದ್ದಾರೆ ಎಂಬುದನ್ನು ಕಲ್ಪಿಸಿಕೊಳ್ಳಿ. ಅಬ್ಬಾ, ಎಷ್ಟೊಂದು ಭಯಾನಕ..! ಜೀವವೇ ಹೋದಂತೆ ಅನಿಸುತ್ತದೆ ಅಲ್ವಾ..? ಆದರೆ, ಇಲ್ಲೊಬ್ಬ ಧೈರ್ಯಶಾಲಿ ಯುವತಿ ಕಥೆ ಕೇಳಿದ್ರೆ ಖಂಡಿತಾ ಆಕೆಯಿಂದ ಸ್ಪೂರ್ತಿ ಪಡೆದುಕೊಳ್ಳುತ್ತೀರಾ.
ಹೌದು, ಗುಜರಾತ್ ರಾಜ್ಯದ ಸೂರತ್‌ನ ಈ ಧೈರ್ಯಶಾಲಿ ವಿದ್ಯಾರ್ಥಿನಿ ಸಾಹಸವನ್ನು ನೀವು ಓದಲೇಬೇಕು. 18 ವರ್ಷದ ರಿಯಾ ಸ್ವೈನ್ ಎಂಬಾಕೆ ತನ್ನ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ, ಬೆಳಗಿನ ಜಾವ 1:30 ರ ಸುಮಾರಿಗೆ ತನ್ನ ಮನೆಯ ಹಿಂಭಾಗದಲ್ಲಿ ಶಬ್ಧ ಬರುತ್ತಿರುವುದನ್ನು ಕೇಳಿಸಿಕೊಂಡಿದ್ದಾಳೆ. ಸ್ವಲ್ಪ ಸಮಯದವರೆಗೆ ಶಬ್ಧವನ್ನು ನಿರ್ಲಕ್ಷಿಸಿದ ನಂತರ, ಕಾಲೇಜು ವಿದ್ಯಾರ್ಥಿನಿಯಾಗಿರುವ ರಿಯಾ ಕೋಣೆಗೆ ಹೋಗಿದ್ದಾಳೆ.
ಈ ವೇಳೆ ತನ್ನ ಮುಂದೆ ಚಾಕು ಹಿಡಿದಿದ್ದ ವ್ಯಕ್ತಿಯನ್ನು ನೋಡಿ ಬೆಚ್ಚಿಬಿದ್ದಿದ್ದಾಳೆ. ರಿಯಾ ತನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಮುಂಚೆಯೇ ದರೋಡೆಕೋರ ಆಕೆಯ ಕುತ್ತಿಗೆ ಮೇಲೆ ಚಾಕು ಹಿಡಿದು ಬೆದರಿಸಿದ್ದಾನೆ. ಈ ವೇಳೆ ಮತ್ತೊಬ್ಬ ದರೋಡೆಕೋರನು ಕೂಡ ಅಟ್ಯಾಕ್ ಮಾಡಿದ್ದಾನೆ. ರಿಯಾ ಕೋಣೆಗೆ ಪ್ರವೇಶಿಸಿದ ಆತ, ಮಲಗಿದ್ದ ಸೋದರಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ದರೋಡೆಕೋರನ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ರಿಯಾಳ ಕೈಯನ್ನು ದರೋಡೆಕೋರ ಚಾಕುವಿನಿಂದ ಕುಯ್ದಿದ್ದಾನೆ. ಆದರೂ ಧೃತಿಗೆಡದ ರಿಯಾ ತನ್ನ ಸಹೋದರಿಯನ್ನು ತನ್ನ ಬಳಿ ಎಳೆದುಕೊಂಡಿದ್ದಾಳೆ. ನಂತರ ರಿಯಾ ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದ್ದಾಳೆ. ಮಗಳ ಚಿಂತಾಜನಕ ಧ್ವನಿಯನ್ನು ಕೇಳಿದ ರಿಯಾಳ ತಾಯಿ ಎಚ್ಚರಗೊಂಡಿದ್ದಾರೆ. ಈ ವೇಳೆ ಇಡೀ ಕುಟುಂಬ ಎಚ್ಚರವಾಗಿದೆ ಎಂಬುದನ್ನು ಮನಗಂಡ ದರೋಡೆಕೋರರು ಎಸ್ಕೇಪ್ ಆಗಿದ್ದಾರೆ. ಜಿಐಡಿಸಿ ಪೊಲೀಸ್ ಠಾಣೆ ವ್ಯಾಪ್ತಿಯ ಚಲತಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.