ವಿದೇಶಿಯರು ಮೊದಲ ಬಾರಿಗೆ ದೇಸಿ ಆಹಾರವನ್ನು ಪ್ರಯತ್ನಿಸಿದಾಗ ಸಾಮಾನ್ಯವಾಗಿ ಭಾರತೀಯರು ಖುಷಿಪಡುತ್ತಾರೆ. ಅದರಲ್ಲೂ ದಕ್ಷಿಣ ಭಾರತ ಶೈಲಿಯ ಬಗೆ-ಬಗೆಯ ಸಾಂಬಾರು, ಪಲ್ಯಗಳೊಂದಿಗೆ ಊಟ ಸವಿಯುವುದೆಂದ್ರೆ ಆಹಾಹಾ…… ಬಾಯಲ್ಲಿ ನೀರೂರುತ್ತದೆ. ಇದೀಗ ವಿದೇಶಿ ಫುಡ್ ಬ್ಲಾಗರ್ ಒಬ್ಬರು ಥಾಲಿ ಸವಿಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ 1.4 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಥೈಲ್ಯಾಂಡ್ ಮೂಲದ ಫುಡ್ ಬ್ಲಾಗರ್ ಮತ್ತು ಯೂಟ್ಯೂಬರ್ ಮಾರ್ಕ್ ವೈನ್ಸ್ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಅವರು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್‌ನಲ್ಲಿ 18 ಬಗೆಯ ವಿವಿಧ ಭಕ್ಷ್ಯಗಳನ್ನು ಸವಿದಿದ್ದಾರೆ. ಬಾಯಲ್ಲಿ ನೀರೂರಿಸುವ ದಕ್ಷಿಣ ಭಾರತೀಯ ಥಾಲಿಯನ್ನು ಅವರು ಸವಿದಿದ್ದು, ಅದರ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಮಾರ್ಕ್ ಪೋಸ್ಟ್ ಮಾಡಿದ್ದಾರೆ.
ಮಾರ್ಕ್ ಸುಗಮ್ ಭಾರತೀಯ ರೆಸ್ಟೋರೆಂಟ್‌ನಲ್ಲಿ ದಕ್ಷಿಣ-ಭಾರತೀಯ ಶೈಲಿಯ 18 ಬಗೆಯ ಭಕ್ಷ್ಯಗಳನ್ನು ಪ್ರಯತ್ನಿಸಿದ್ದಾರೆ. ಆಹಾರ ಬ್ಲಾಗರ್ ಬಾಳೆ ಎಲೆಯ ಮೇಲೆ ಹರಡಿದ ವಿವಿಧ ಭಕ್ಷ್ಯಗಳನ್ನು ರುಚಿ ನೋಡುತ್ತಾ, ಕಳೆದುಹೋಗಿದ್ದಾರೆ. ಮೊದಲಿಗೆ ಉಪ್ಪಿನಕಾಯಿ, ಪಲ್ಯ, ಅನ್ನ, ರಸಂ, ಹಪ್ಪಳ ಸೇರಿದಂತೆ ವಿವಿಧ ಬಗೆಯ ಭಕ್ಷ್ಯಗಳನ್ನು ಬಡಿಸಲಾಗಿತ್ತು. ಭಾರತೀಯರಂತೆ ಸ್ಪೂನ್ ಉಪಯೋಗಿಸದೆ ಕೈಯಿಂದಲೇ ತಿಂದಿರೋದು ವಿಶೇಷವಾಗಿತ್ತು.
ಅನ್ನದ ಜೊತೆ ಎಲ್ಲಾ ಬಗೆಯ ಸಾಂಬಾರನ್ನು ಒಂದೊಂದಾಗಿ ಹಾಕುತ್ತಾ ಅವರು ಸವಿದಿದ್ದಾರೆ. ಪ್ರತಿಯೊಂದು ಸಾಂಬಾರು ಪದಾರ್ಥವನ್ನು ಸೇರಿಸಿ ಊಟ ಮಾಡುತ್ತಾ ಅವರು ಆನಂದಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಏಳು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಊಟ ಮಾಡುವಾಗ ಅವರು ನೀಡಿರುವ ಪ್ರತಿಕ್ರಿಯೆ ನೆಟ್ಟಿಗರಿಗೆ ಖುಷಿ ತರಿಸಿದೆ.